ಜಿಲ್ಲೆ

ಔರಾದ್ ನಲ್ಲಿ ಸಿಬ್ಬಂದಿ ಕೊರತೆ ನೀಗಿಸಿ

ರೇವಣಸಿದ್ದಪ್ಪ ಪಾಟೀಲ್

ಔರಾದ್: ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಆಡಳಿತ ವ್ಯವಸ್ಥೆಗೆ ತೊಂದರೆ ಜತೆಗೆ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಈ ಕೊರತೆ ನೀಗಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಆಗ್ರಹಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಚವ್ಹಾಣ್ ಅವರು, ಔರಾದ್ ತಾಲೂಕಿನ ರೈತ ಸಂಪರ್ಕ ಕೇಂದ್ರ ಸಿಬ್ಬಂದಿ ಕೊರತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ತಾಲೂಕಿನ ಏಳು ರೈತ ಸಂಪರ್ಕ ಕೇಂದ್ರಗಳಲ್ಲಿ ಮಂಜೂರಾಗಿರುವ 23 ಹುದ್ದೆ ಪೈಕಿ 19 ಖಾಲಿ ಇರುವುದು ಸರ್ಕಾರದ ಗಮನಕ್ಕಿದೆ. ಖಾಲಿ ಹುದ್ದೆಗಳಿಗೆ ಲಭ್ಯವಿರುವ ಸಿಬ್ಬಂದಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ ಎಂದು ತಿಳಿಸಿದರು.

ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಒಬ್ಬರು ಮಾತ್ರ ಕಾಯಂ ಉಪನ್ಯಾಸಕರಿರುವ ಬಗ್ಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಖಾಲಿ ಹುದ್ದೆ ಭರ್ತಿಗೆ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಕರಡು ನಿಯಮ ರಚಿಸಿ ಸರ್ಕಾರದ ಅಸೂಚನೆಯಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆ ಆಹ್ವಾನಿಸಲಾಗಿದೆ. ಅಂತಿಮ ಅಸೂಚನೆ ನಂತರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ಶೈಕ್ಷಣಿಕ ಚಟುವಟಿಕೆಗೆ ತೊಂದರೆ ಆಗದಂತೆ ಅತಿಥಿ ಉಪನ್ಯಾಸಕರ ಸೇವೆ ಬಳಸಲಾಗುತ್ತಿದೆ ಎಂದು ಹೇಳಿದರು.

ಪಟ್ಟಣದ ಐಟಿಐ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವ ಚವ್ಹಾಣ್ ಪ್ರಶ್ನೆಗೆ, ಕಿರಿಯ ತರಬೇತಿ ಅಧಿಕಾರಿಗಳ ನೇಮಕಾತಿಗೆ ಸಂಬಂಸಿದ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದ್ದು, ಇತ್ಯರ್ಥವಾಗುತ್ತಿದ್ದಂತೆ ಕಾಯಂ ಬೋಧಕರ ನೇಮಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉತ್ತರಿಸಿದರು.

ಔರಾದ್ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಇಲಾಖೆ ಕಚೇರಿಗಳಲ್ಲಿ ಕಾಯಂ ಸಿಬ್ಬಂದಿ ಕೊರತೆಯಿದ್ದು, ಸರ್ಕಾರದ ಯೋಜನೆಗಳು ಸಮರ್ಪಕ ಅನುಷ್ಠಾನಗೊಳ್ಳುತ್ತಿಲ್ಲ. ಸಾರ್ವಜನಿಕರು ನಿತ್ಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಬಾರಿ ಪತ್ರ ಬರೆದು ಸರ್ಕಾರದ ಗಮನಕ್ಕೆ ತಂದಿದ್ದು, ಗಂಭೀರ ಪರಿಗಣಿಸಬೇಕು ಎಂದು ಶಾಸಕ ಪರಭು ಚವ್ಹಾಣ್ ಎಂದು ಆಗ್ರಹಿಸಿದ್ದಾರೆ.