ಬೀದರ್: ವೈಜ್ಞಾನಿಕ ಪರಿಹಾರ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ಸಿಗದಿದ್ದಕ್ಕೆ ಬೇಸತ್ತು ಕಾರಂಜಾ ನೀರಾವರಿ ಯೋಜನೆ ಮುಳುಗಡೆ ಸಂತ್ರಸ್ತರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಶುಕ್ರವಾರ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಧ್ವನಿಸಿತು.
ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಸಭಾಧ್ಯಕ್ಷರ ಹಾಗೂ ಸರ್ಕಾರದ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಎರಡು ವರ್ಷದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಸಂತ್ರಸ್ತರು ಸರ್ಕಾರದ ಅಸಡ್ಡೆ ಧೋರಣೆಗೆ ಬೇಸತ್ತು ಮಾಡು ಇಲ್ಲವೇ ಮಡಿ ಹೋರಾಟವನ್ನು ಆರಂಭಿಸಿದ್ದಾರೆ.
ನಿನ್ನೆ ಮೂವರು ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರೆಲ್ಲ ಬ್ರಿಮ್ಸ್ ಆಸ್ಪತ್ರೆ ತೀವ್ರ ನಿಗಾ ಘಟಕ(ಐಸಿಯು) ದಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾರಂಜಾ ನೀರಾವರಿ ಯೋಜನೆಗೆ ಈ ಭಾಗದ ವಿವಿಧ ಗ್ರಾಮಗಳ ಸಹಸ್ರಾರು ರೈತರು ತಮ್ಮ ಸಮೃದ್ಧವಾದ 24 ಸಾವಿರ ಎಕರೆ ಜಮೀನು ನೀಡಿದ್ದಾರೆ. ರೈತರು ನೀಡಿದ ಜಮೀನಿನ ಫಲವಾಗಿಯೇ ಬೀದರ್ ಜಿಲ್ಲೆಯ ಅರ್ಧಕ್ಕೂ ಹೆಚ್ಚು ಜನರು ಕಾರಂಜಾ ಜಲಾಶಯದ ನೀರು ಅವಲಂಬಿಸಿದ್ದಾರೆ. ಸಾಕಷ್ಟು ಹೊಲಕ್ಕೆ ನೀರಾವರಿ ಸೌಲಭ್ಯ ಸಹ ಸಿಕ್ಕಿದೆ. ಆದರೆ ಭೂಮಿ ಕಳೆದುಕೊಂಡ ರೈತರು ಮಾತ್ರ ಕಳೆದ ಐದು ದಶಕಗಳಿಂದ ಸಮಸ್ಯೆಗಳಲ್ಲೇ ದಿನದೂಡುತ್ತಿದ್ದಾರೆ. ವೈಜ್ಞಾನಿಕ ಪರಿಹಾರಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಸಹನೆ ಕಳೆದುಕೊಂಡ ಸಂತ್ರಸ್ತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ಧರಣಿ ಹೂಡಿದ ಟೆಂಟ್‌ನಲ್ಲೇ ವಿಷ ಸೇವಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಲ್ಪಿಸದಿದ್ದರೆ ಅನಾಹುತ ಸಂಭವಿಸುವ ಅಪಾಯವಿದೆ. ಸರ್ಕಾರ ತುರ್ತು ಕ್ರಮ ಕೈಗೊಂಡು ಸಂತ್ರಸ್ತರ ಬೆನ್ನಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಕಾರಂಜಾ ಸಂತ್ರಸ್ತರು ಸುದೀರ್ಘ ಅವಧಿಯಿಂದ ಹೋರಾಟ ನಡೆಸುತ್ತಿದ್ದಾರೆ. ಹಿಂದೆಯೂ ಸದನದಲ್ಲಿ ಈ ವಿಷಯದ ಬಗ್ಗೆ ಗಮನ ಸೆಳೆಯಲಾಗಿತ್ತು. ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದರಾದರೂ ನಂತರ ಯಾವುದೇ ಬೆಳವಣಿಗೆ ಆಗಿಲ್ಲ. ಸಚಿವರು ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕೆಂದು ಡಾ.ಬೆಲ್ದಾಳೆ ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು, ಶಾಸಕರಾದ ಪ್ರಭು ಚವ್ಹಾಣ, ಶರಣು ಸಲಗರ, ಸಿದ್ದು ಪಾಟೀಲ ಸಹ ಡಾ.ಬೆಲ್ದಾಳೆ ಅವರ ಬೇಡಿಕೆಗೆ ಧ್ವನಿಗೂಡಿಸಿ, ಸರ್ಕಾರ ಈ ವಿಷಯದಲ್ಲಿ ಉದಾಸೀನತೆ ತೋರುವುದು ಸಲ್ಲದು. ವಿಷ ಸೇವಿಸಿದ ರೈತರ ಚಿಕಿತ್ಸೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಉನ್ನತಾಧಿಕಾರಿಗಳ ತಂಡಕ್ಕೆ ಬೀದರ್‌ಗೆ ಕಳಿಸಿ ವಸ್ತುಸ್ಥಿತಿ ಅರಿತು, ಸಂತ್ರಸ್ತರ ಬೇಡಿಕೆಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ವಿಷಯ ಸಂತ್ರಸ್ತರ ಆತ್ಮಹತ್ಯೆವರೆಗೂ ಹೋಗಿರುವುದು ಕಳವಳಕಾರಿ. ಸ್ಥಳೀಯ ಜನಪ್ರತಿನಿಧಿಗಳೆಲ್ಲರೂ ರೈತರ ಜೊತೆಗೆ ಇರಬೇಕು. ಯಾವೊಬ್ಬ ರೈತ ಆತ್ಮಹತ್ಯೆಯಂಥ ಕೃತ್ಯಕ್ಕೆ ಕೈಹಾಕದಂತೆ ನೋಡಿಕೊಳ್ಳಬೇಕು. ಇಂಥ ವಿಷಯ ಬಂದಾಗ ಸಂಬಂಧಿತ ಸಚಿವರ ಕಚೇರಿಗೆ ಹೋಗಿ ಚರ್ಚಿಸಿ, ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಸದ್ಯ ಸಚಿವರು ಸದನದಲ್ಲಿಲ್ಲ. ಹೀಗಾಗಿ ಸೋಮವಾರ ಅವರಿಂದ ಉತ್ತರ ಕೊಡಿಸಲಾಗುವುದು ಎಂದು ಭರವಸೆ ನೀಡಿ, ಚರ್ಚೆಗೆ ತೆರೆ ಎಳೆದರು.
ಮನ್ನಾಎಖ್ಖೇಳ್ಳಿಯಲ್ಲಿ ಸರ್ಕಾರಿ
ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿರುವ ಚಿಟಗುಪ್ಪಾ ತಾಲೂಕಿನ ಮನ್ನಾಎಖ್ಖೇಳ್ಳಿಯಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭಿಸುವಂತೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿ ಮೇಲಿರುವ ಮನ್ನಾಎಖ್ಖೇಳ್ಳಿಯಲ್ಲಿ ಸುಮಾರು 13 ಪ್ರೌಢ ಶಾಲೆಗಳಿವೆ. ಸುತ್ತಲಿನ ಹತ್ತಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಪ್ರತಿ ವರ್ಷ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹತ್ತನೇ ಪಾಸಾಗಿ ಕಾಲೇಜಿಗೆ ಪ್ರವೇಶ ಪಡೆಯುತ್ತಾರೆ. ಇವರು ದೂರದ ಹುಮನಾಬಾದ್, ಚಿಟಗುಪ್ಪಾ ಅಥವಾ ಬೀದರ್‌ಗೆ ಹೋಗಬೇಕಾಗುತ್ತಿದೆ. ಸರ್ಕಾರಿ ಕಾಲೇಜು ಇಲ್ಲದ ಕಾರಣ ಬಡ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರ್ಕಾರದ ಮುಂದಿರುವ ಪ್ರಸ್ತಾವನೆಯಂತೆ ಸರ್ಕಾರಿ ಪಿಯು ಕಾಲೇಜು ಆರಂಭಿಸಬೇಕು ಎಂದು ಕೋರಿದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ಇಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಕಾಲೇಜು ಆಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಇದೆ. ಆರ್ಥಿಕ ಇಲಾಖೆ ಕೆಲವೊಂದು ಅಂಶಗಳ ಬಗ್ಗೆ ಮಾಹಿತಿ ಕೇಳಿದೆ. ಅದನ್ನು ಪರಿಶೀಲಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.