ಜಿಲ್ಲೆ

ಅಕ್ಷರ ಪ್ರೀತಿ ಎಲ್ಲರಲ್ಲಿ ಬೆಳೆಯಲಿ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಇಂದಿನ ಯುವ ಸಮುದಾಯದ ಜನರಲ್ಲಿ ಕಥೆ, ಕವನ ರಚಿಸುವುದು, ಪುಸ್ತಕ ಪ್ರಕಟಿಸಿ, ಅಕ್ಷರ ಪ್ರೀತಿ ಬೆಳೆಸುವ ಅವಶ್ಯಕತೆ ಇದೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.

ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಹಿರಿಯ ಸಾಹಿತಿ ಡಾ.ಬಸವರಾಜ ಬಲ್ಲೂರ ಅವರು ಬರೆದ ಅಕ್ಷರ ಸಂಸ್ಕೃತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದೆ. ಫೇಸ್ಬುಕ್, ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಇದರಿಂದ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ಸಾಹಿತಿ ಬಲ್ಲೂರ ರಚಿತ ಪುಸ್ತಕ ಅತ್ಯುತ್ತಮವಾಗಿದೆ. ಇದರಲ್ಲಿ ಹಿರೇಮಠ ಸಂಸ್ಥಾನದ ಪರಿಚಯ, ಪೂಜ್ಯರ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಹಿಡಿದಿಡುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ತಿಳಿಹೇಳುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಹಿರೇಮಠ ಸಂಸ್ಥಾನದ ಪೀಠಾಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದರು. ಉಮಾ ಪ್ರಕಾಶ ಖಂಡ್ರೆ, ವಿಜಯಕುಮಾರ ಪಾಟೀಲ್, ಇಂದುಮತಿ ನಾಗರಾಜ, ನಾಗರಾಜ ಗೊರನಾಳೆ, ನಿರಂಜನ, ಲಿಂಗಾನಂದ ಇತರರಿದ್ದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿ, ವಂದಿಸಿದರು.