ಬೀದರ್: ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ, ಲೋಪ ಅಥವಾ ಕಳಪೆ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ(ಕೆಡಿಪಿ) ಸಭೆ ನಡೆಸಿದ ಅವರು, ಬೀದರ್ ದಕ್ಷಿಣ ಸಂಪೂರ್ಣ ಹಳ್ಳಿಗಳಿಂದ ಕೂಡಿದ ಕ್ಷೇತ್ರ. ಗ್ರಾಮೀಣ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಸೌಲಭ್ಯ ಒದಗಿಸಬೇಕು. ಇಲ್ಲವಾದರೆ ಕ್ರಮ ಅನಿವಾರ್ಯ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಪ್ರತಿ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಶ್ರಮಿಸಬೇಕು. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಿಬ್ಬಂದಿ ಜತೆ ನೇರ ಸಂಪರ್ಕ ಸಾಧಿಸಿ ಕಾಲಕಾಲಕ್ಕೆ ಕಾಮಗಾರಿ, ಯೋಜನೆಗಳ ಪ್ರಗತಿ ಪರಿಶೀಲಿಸಿ ಪ್ರಾಥಮಿಕ ಮಾಹಿತಿ ಹೊಂದಬೇಕು ಎಂದು ಸೂಚಿಸಿದರು.
ಪ್ರತಿ ಮನೆಗೆ ಶೌಚಗೃಹ ಅಗತ್ಯವಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಶೌಚಗೃಹ ನಿರ್ಮಾಣಕ್ಕೆ ಒತ್ತು ನೀಡಿದ್ದರಿಂದ ಬಹುತೇಕ ಗ್ರಾಮಗಳು ಬಯಲು ಬಹಿರ್ದೆಸೆಮುಕ್ತವಾಗಿವೆ. ನಗರ ಪ್ರದೇಶದಂತೆ ಹಳ್ಳಿಗಳಲ್ಲೂ ಕಸ ಸಂಗ್ರಹಿಸಬೇಕು. ಹಸಿ ಮತ್ತು ಒಣಕಸ ವಿಂಗಡಿಸಿ ಸಮಗ್ರ ನಿರ್ವಹಣೆ ಬಗ್ಗೆ ಎಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದರು.
ಹಲವು ವರ್ಷದಿಂದ ನಾನಾ ಕಾಮಗಾರಿ ಬಾಕಿ ಉಳಿದಿದ್ದು ಕಂಡರೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಪೂರ್ಣಗೊಳಿಸಬೇಕು. ಸರ್ಕಾರಿ ಸ್ಥಳ ಮತ್ತು ಕೆರೆ ಒತ್ತುವರಿಯಾದರೆ ತಕ್ಷಣ ತೆರವುಗೊಳಸಬೇಕು. ನರೇಗಾದಡಿ ಹೂಳು ತೆಗೆದು ಕೆರೆಗಳಿಗೆ ಮರುಜೀವ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ಸ್ಪಂದಿಸಬೇಕು. ಹಳ್ಳಿ ಜನರ ಆರೋಗ್ಯ ಕುರಿತು ಜಾಗೃತಿ ಮೂಡಿಸಬೇಕು. ಹಾಳಾದ ರಸ್ತೆಗಳ ರಿಪೇರಿ ಮಾಡಬೇಕು. ರಸ್ತೆ ಪಕ್ಕ ಮರಗಳು ಬೆಳೆದು ವಾಹನ ಸಂಚಾರಕ್ಕೆ ಅಡ್ಡಿಯಾದರೆ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು. ಸರ್ಕಾರದಿಂದ ರೈತರಿಗಾಗಿ ಬರುವ ಹನಿ ನೀರಾವರಿ, ತುಂತುರು ನೀರಾವರಿ ಯೋಜನೆಗಳನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಸಮರ್ಪಕ ಜಾರಿಗೊಳಿಸಬೇಕು ಎಂದು ಹೇಳಿದರು.
ಸಹಾಯಕ ಆಯುಕ್ತ ಮಹ್ಮದ್ ಶಕೀಲ್, ತಾಪಂ ಇಒ ಕಿರಣಕುಮಾರ ಇದ್ದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಿ
ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು. ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಮತ್ತು ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಉದ್ಯೋಗ ಖಾತ್ರಿಯಡಿ ಕಂಪೌಂಡ್, ಶೌಚಗೃಹ ಸೇರಿ ಮೂಲಸೌಕರ್ಯ ಒದಗಿಸಬೇಕು. ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಬಿಸಿಯೂಟ, ಬಟ್ಟೆ, ಶೂ ವಿತರಣೆ ಇತರ ಸೌಲಭ್ಯಗಳನ್ನು ಸಮರ್ಪಕ ಜಾರಿಗೊಳಿಸಬೇಕು ಎಂದು ಸೂಚಿಸಿದರು.