ಬೀದರ್: ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಯನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ತೀವ್ರವಾಗಿ ಖಂಡಿಸಿದ್ದಾರೆ.
ಬಸವಣ್ಣನವರು ಹೊಳೆಗೆ ಹಾರಿದ್ದರೆಂದು ಯತ್ನಾಳ ನೀಡಿರುವ ಹೇಳಿಕೆ ಆಧಾರ ರಹಿತ ಎಂದು ಹೇಳಿದ್ದಾರೆ.
ಮಹಾ ಮಾನವತಾವಾದಿ ಬಸವಣ್ಣನವರ ತವರು ಜಿಲ್ಲೆಯಲ್ಲಿ ಜನಿಸಿದರೂ ಯತ್ನಾಳ ಅವರಿಗೆ ಅವರ ಇತಿಹಾಸ ಗೊತ್ತಿಲ್ಲ. ನಾಲಿಗೆ ಮೇಲೆ ಹಿಡಿತವೂ ಇಲ್ಲ. ಜನರ ಚಪ್ಪಾಳೆ ಗಿಟ್ಟಿಸಲು ಮನಬಂದಂತೆ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಲಾಯನವಾದಿ ಎಂಬರ್ಥದಲ್ಲಿ ಹೇಳಿಕೆ ಕೊಟ್ಟು ಬಸವಣ್ಣನವರಿಗೆ ಅಪಮಾನ ಮಾಡಿದ್ದಾರೆ. ವಿಶ್ವದಾದ್ಯಂತ ಇರುವ ಬಸವಾನುಯಾಯಿಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವಣ್ಣನವರು ಸಮಾನತೆ ಸಮಾಜ ಕಟ್ಟಲು ಕ್ರಾಂತಿ ಮಾಡಿದ್ದರು. ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಬಸವಾನುಯಾಯಿಗಳು ಸಹಿಸುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯತ್ನಾಳ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಬಸವಣ್ಣನವರ ಕುರಿತು ನೀಡಿದ ಅಪಮಾನಕರ ಹೇಳಿಕೆಯನ್ನು ಯತ್ನಾಳ ಕೂಡಲೇ ಹಿಂಪಡೆಯಬೇಕು. ಸಾರ್ವಜನಿಕವಾಗಿ ಬಸವಾನುಯಾಯಿಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.