ಚಿಟಗುಪ್ಪ: ರಾಜ್ಯಾದ್ಯಂತ ರೈತರು ಹಾಗೂ ಮಠ-ಮಂದಿರ ಪಹಣಿಯಲ್ಲಿ ವಕ್ ಆಸ್ತಿ ಎಂದು ನಮೂದಿಸಿದ್ದರ ನೈಜ ವರದಿ ಸಂಗ್ರಹಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ತಂಡ ಡಿ.4ರಂದು ಜಿಲ್ಲೆಗೆ ಭೇಟಿ ನೀಡಲಿದೆ ಎಂದು ತಂಡದ ಸಂಯೋಜಕರೂ ಆದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ವಕ್ ಸಂಬಂಧ ವರದಿ ಸಂಗ್ರಹಿಸಲು ನಮ್ಮ ಭೂಮಿ ನಮ್ಮ ಹಕ್ಕು ಘೋಷವಾಕ್ಯದಡಿ ಪಕ್ಷ ಮೂರು ತಂಡ ರಚಿಸಿದೆ. ಇದರಲ್ಲಿ ವಿಜಯೇಂದ್ರ ಟೀಮ್ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಮನ್ನಾಎಖೇಳ್ಳಿ ಕ್ರಾಸ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
4ರಂದು ಬೆಳಗ್ಗೆ 9ಕ್ಕೆ ಇಲ್ಲಿಗೆ ಆಗಮಿಸುವ ವಿಜಯೇಂದ್ರ ತಂಡ, 10.30ಕ್ಕೆ ಗಾಢ ಗಂಜ್ ನ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ನಂತರ ಗಾಂಗಂಜ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ವಕ್ ಕಚೇರಿಗೆ ಮುತ್ತಿಗೆ ಹಾಕಲಿದೆ ಎಂದು ಹೇಳಿದರು.
ತಂಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಡಾ.ಸಿ.ಎನ್. ಅಶ್ವಥ್ ನಾರಾಯಣ, ಮುರುಗೇಶ ನಿರಾಣಿ, ಬಿ.ಶ್ರೀರಾಮುಲು, ರಮೇಶ ಜಾರಕಿಹೊಳಿ, ಈರಣ್ಣ ಕಡಾಡಿ, ಸುನೀಲ ವಲ್ಲಾಪುರೆ ಇತರರು ಇರಲಿದ್ದಾರೆ ಎಂದರು.
ವಕ್ ಬೋಡ್೯ ನಿಂದ ಅನ್ಯಾಯಕ್ಕೆ ಒಳಗಾದ ಎಲ್ಲ ಸಮಾಜದ ರೈತರು, ಮಠಾಶರು ಪಾಲ್ಗೊಂಡು ಮಾಹಿತಿ ನೀಡಬೇಕು. ಹೋರಾಟದಲ್ಲಿ 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ದಕ್ಷಿಣ ಕ್ಷೇತ್ರದಿಂದ 3000ಕ್ಕೂ ಅಕ ಜನ ಭಾಗವಹಿಸಲಿದ್ದಾರೆ ಎಂದ ಬೆಲ್ದಾಳೆ, ಈ ತಂಡ ಬೀದರ್ ನಂತರ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ ಇತರ ಜಿಲ್ಲೆಗಳಿಗೆ ಭೇಟಿ ನೀಡಲಿದೆ ಎಂದು ತಿಳಿಸಿದರು.
ಪಕ್ಷದ ನಿರ್ದೇಶನದಂತೆ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 62 ಸಾವಿರ ಸದಸ್ಯತ್ವ ಮಾಡಿಸಲಾಗಿದೆ. ರಾಜ್ಯದಲ್ಲಿ ದಕ್ಷಿಣ ಕ್ಷೇತ್ರ 14ನೇ ಸ್ಥಾನದಲ್ಲಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ, ಪ್ರಧಾನ ಕಾರ್ಯದರ್ಶಿಗಳಾದ ಸಂಜುಕುಮಾರ ಕೋಲಿ, ಚಂದ್ರಯ್ಯ ಸ್ವಾಮಿ, ಪ್ರಮುಖರಾದ ರಾಜು ಪಸಾರ, ರಾಜಕುಮಾರ ಪಾಂಚಾಳ, ರವಿ ಸ್ವಾಮಿ, ಪ್ರವೀಣ ತರಿ, ವಿಜಯಕುಮಾರ ಕಾರಪಾಕಪಳ್ಳಿ, ಅಬೇದ್ ಅಲಿ, ತಾಜೊದ್ದೀನ್, ಜಗನ್ನಾಥ ಮಜಗೆ, ಮಹೇಶ, ವೀರಪ್ಪ ಮಂಗಲಗಿ, ಝರೆಪ್ಪ ಹಂದಿಕೇರಾ, ಶರಣು ಪಾಟೀಲ್ ನಿರ್ಣಾ ಇದ್ದರು.
ಚಟ್ನಳ್ಳಿ ಗ್ರಾಮಕ್ಕೆ ಭೇಟಿ
ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲೇ 960 ಎಕರೆ ಪಹಣಿಯಲ್ಲಿ ವಕ್ ಎಂದು ನಮೂದಿಸಲಾಗಿದೆ. ಈ ಹಳ್ಳಿಗೆ ವಿಜಯೇಂದ್ರ ತಂಡ ಭೇಟಿ ನೀಡಿ ರೈತರು ಮತ್ತು ಗ್ರಾಮಸ್ಥರ ಜತೆ ಸಮಾಲೋಚನೆ ನಡೆಸಲಿದೆ ಎಂದು ಶಾಸಕ ಡಾ.ಬೆಲ್ದಾಳೆ ತಿಳಿಸಿದರು.
ಯತ್ನಾಳ್ ಹೇಳಿಕೆಗೆ ಕಿಡಿ
ವಿಶ್ವಗುರು ಬಸವಣ್ಣನವರ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಗುರವಾಗಿ ಹೇಳಿರುವುದನ್ನು ಖಂಡಿಸಿದ ಡಾ.ಬೆಲ್ದಾಳೆ, ಬಸವಣ್ಣ ಸಮಾಜ ಸುಧಾರಕ, ಪ್ರಭುತ್ವದ ಕಾಲದಲ್ಲಿ ಪ್ರಜಾಪ್ರಭುತ್ವ ಜಾರಿಗೆ ತಂದ ಮಹಾತ್ಮ. ಅಂಥವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು ಸರಿಯಲ್ಲ. ಯತ್ನಾಳ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.