ಬೀದರ್: ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಅತ್ಯಂತ ಅವಹೇಳನ ಹೇಳಿಕೆ ನೀಡಿದ್ದನ್ನು ಖಂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡರೆ, ಯತ್ನಾಳ್ ಜೋಕರ್ ಹಾಗೂ ಮಾನಸಿಕ ರೋಗಿ ಎಂದು ವ್ಯಂಗ್ಯವಾಡಿದರು.
ಬಸವಣ್ಣನವರಂತೆ ಹೊಳೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಿ ಎಂಬ ಯತ್ನಾಳ್ ಹೇಳಿಕೆ ಹೇಡಿಯಂತೆ ಬಿಂಬಿಸುವ ಕೆಲಸ. ಇತಿಹಾಸ ಅರಿಯದೆ, ಸಂಘ ಪರಿವಾರದವರನ್ನು ಖುಷಿಪಡಿಸಲು ಈ ರೀತಿ ಹೇಳಿಕೆ ನೀಡಿದ್ದು ಖಂಡನೀಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಬಸವಣ್ಣ ಅವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಸಮಸಮಾಜಕ್ಕಾಗಿ 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ್ದು ಶರಣರು. ಬಸವಣ್ಣನ ಬಗ್ಗೆ ಇತಿಹಾಸ ಅರಿಯಲು ಜಗತ್ತಿನ ಜನ ಪ್ರಯತ್ನಿಸುತ್ತಿರುವ ವೇಳೆ ಬಿಜೆಪಿ ಆಂತರಿಕ ಕಲಹವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಯತ್ನಾಳ್ ಹೀಗೆ ಹೇಳಿದ್ದು ಸರಿಯಲ್ಲ. ಅವರು ಮಾನಸಿಕ ವೈದ್ಯರ ಹತ್ತಿರ ಹೋಗಿ ಚಿಕಿತ್ಸೆ ಪಡೆಯುವುದು ಸೂಕ್ತ ಎಂದರು.
ಯತ್ನಾಳ್ ಮತ್ತು ಅವರ ತಂಡದ್ದು ವಿಜಯೇಂದ್ರ ಹಟಾವೋ ಹೋರಾಟ. ಪಕ್ಷವನ್ನು ತನ್ನ ಹತೋಟಿಗೆ ತರಲು ಪ್ರತಿಭಟನೆ ನೆಪದಲ್ಲಿ ನಾಟಕವಾಡುತ್ತಿರುವ ಯತ್ನಾಳ್ ವಿರುದ್ಧ ಪ್ರಕರಣ ದಾಖಲಿಸುವ ಸಂಬಂಧ ಸಿಎಂ ಗಮನಕ್ಕೆ ತಂದು ಒತ್ತಾಯಿಸುವೆ. ಅವಹೇಳನ ಕುರಿತು ಬಸನಗೌಡ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ನೋಟಿಸ್ ನೀಡಿದ್ದು ವಾಪಸ್ ಪಡೆಯುವುದಾಗಿ ವಕ್ಫ್ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಆದರೆ ವಕ್ ಹೆಸರಿನಲ್ಲಿ ಯತ್ನಾಳ್ ಹೋರಾಟ ಮಾಡುತ್ತಿರುವುದು ರೈತರ ಪರವಲ್ಲ. ವಕ್ಫ್ ಸಂಬಂಧ ಬಿಜೆಪಿ ಅವಧಿಯಲ್ಲಿ ಹೆಚ್ಚು ನೋಟಿಸ್ ನೀಡಲಾಗಿದೆ. ನಾನು ಮಂತ್ರಿಯಾದ ಬಳಿಕ ಜಿಲ್ಲೆಯಲ್ಲಿ ಒಂದೇ ಒಂದು ನೋಟಿಸ್ ನೀಡಿಲ್ಲ ಹಾಗೂ ಯಾವ ಖಾತೆಯೂ ಬದಲಾವಣೆ ಮಾಡಿಲ್ಲ. ಇಲ್ಲಿನ ಬಸವಗಿರಿ ಭೂಮಿ ಪಹಣಿಯಲ್ಲಿ ವಕ್ ಎಂದು ನಮೂದಾಗಿದ್ದರೆ ಸರಿಪಡಿಸಲು ಸೂಚನೆ ನೀಡುವೆ ಎಂದು ತಿಳಿಸಿದರು.
ಬಸವಣ್ಣ ಸ್ಥಾಪಿಸಿದ ಮೂಲ ಅನುಭವ ಮಂಟಪ ಒತ್ತುವರಿ ಮಾಡಿ ಪೀರ್ ಪಾಷಾ ಬಂಗ್ಲಾ ನಿರ್ಮಿಸಿದ್ದು, ಮರಳಿ ಪಡೆಯಲಾಗುವುದು ಎಂದು ಕೆಲವರು ಹೇಳಿಕೆ ನೀಡಿ ವಿವಾದ ಸೃಷ್ಟಿಸಲು ಹೊರಟಿದ್ದಾರೆ. ತ್ರಿಪುರಾಂತ ಕೆರೆ ದಡದಲ್ಲಿ ಅನುಭವ ಮಂಟಪ ಇತ್ತೆಂದು ಸಂಶೋಧಕರು ಹೇಳಿದ್ದಾರೆ. ಅದರಂತೆ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿ ವೇಗದಿಂದ ಸಾಗಿದೆ. ಇದು ಕೆಲವರಿಗೆ ಹಿಡಿಸುತ್ತಿಲ್ಲ. ಅನಗತ್ಯವಾಗಿ ಹೋರಾಟ ಮಾಡುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಎಫ್ .ಆರ್.ಪಿ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿಪಡಿಸಲಿದೆ. ಇದಕ್ಕೆ ಹೊರತುಪಡಿಸಿ ರಾಜ್ಯ ಸಲಹಾ ಬೆಲೆ ಸಮಿತಿ ಇದ್ದು, ಸಚಿವರು ಅಧ್ಯಕ್ಷರಾಗಿರುತ್ತಾರೆ. ಎಫ್ಆರ್ಪಿ ಹೊರತುಪಡಿಸಿ ಹೆಚ್ಚುವರಿ ಬೆಲೆ ನಿಗದಿಪಡಿಸಲು ಈ ಸಮಿತಿಗೆ ಅಧಿಕಾರವಿದೆ. ಈ ಬಗ್ಗೆ ಸಚಿವರಿಗೆ ಮನವಿ ಮಾಡಿರುವೆ ಎಂದರು.
ಚುನಾವಣೆ ಪ್ರಜಾಪ್ರಭುತ್ವದ ಬುನಾದಿ. ಪ್ರಸ್ತುತ ಚುನಾವಣೆಗಳ ಬಗ್ಗೆ ಅನುಮಾನ ಮೂಡುವಂತಾಗಿದೆ. ವಿವಿಧ ದೇಶಗಳಲ್ಲಿ ಮತ ಪತ್ರಗಳ ಮೂಲಕ ಚುನಾವಣೆ ನಡೆಯುವಂತೆ ನಮ್ಮಲ್ಲೂ ಕ್ರಮ ವಹಿಸಬೇಕು. ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಇದ್ದು, ಈ ಹುದ್ದೆ ಖಾಲಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬೀದರ್ ಹಾಗೂ ಬಸವ ಉತ್ಸವ ಕುರಿತು ಎಲ್ಲ ಪಕ್ಷದ ಮುಖಂಡರು, ಸಮುದಾಯದವರು, ಸಂಘಟನೆಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವೆ. ಎಲ್ಲರೂ ಒಗ್ಗಟ್ಟಾಗಿ ಉತ್ಸವ ಮಾಡಲು ಹೇಳಿದರೆ ಕ್ರಮ ವಹಿಸಲಾಗುವುದು ಎಂದರು.
ಪೌರಾಡಳಿತ ಸಚಿವ ರಹೀಮ್ ಖಾನ್, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಎಂ.ಡಿ. ಗೌಸ್, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಅಮೃತರಾವ ಚಿಮಕೋಡೆ, ದತ್ತು ಮೂಲಗೆ ಇದ್ದರು.
ಯತ್ನಾಳ್ ಮೂಲಕ ಬಿಜೆಪಿ ವರಿಷ್ಠರು ಛೂ
ಬಿಜೆಪಿ ವರಿಷ್ಠರು ಬಸನಗೌಡ ಯತ್ನಾಳ್ ಮೂಲಕ ಬಸವಣ್ಣನವರ ಅವಹೇಳನ ಮಾಡಲು ಛೂ ಬಿಟ್ಟಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ದೂರಿದರು. ಯತ್ನಾಳ್ ಅವಹೇಳನಕ್ಕೆ ಬಿಜೆಪಿಯವರು ಖಂಡಿಸಿಲ್ಲ. ಮೌನಂ ಸಮ್ಮತಿ ಲಕ್ಷಣ ಎನ್ನುವಂತೆ ವರ್ತಿಸುತ್ತಿದ್ದಾರೆ. ಬಸವಣ್ಣ ಹೆಸರಿನಲ್ಲಿ ಮತ ಕೇಳುವ ಕೇಸರಿಪಡೆ, ಯತ್ನಾಳ್ ಅವಹೇಳನಕಾರಿ ಮಾತಿನ ಈವರೆಗೆ ಒಂದೂ ಸ್ಪಷ್ಟನೆ ನೀಡಿಲ್ಲ ಎಂದು ಆರೋಪಿಸಿದರು.
ಅಧಿವೇಶನದಲ್ಲಿ ಕಾರಂಜಾ ಸಂತ್ರಸ್ತರ ಸಭೆ
ಜಿಲ್ಲೆಯ ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರ ಬೇಡಿಕೆ ಸಂಬಂಧ ಬೆಳಗಾವಿ ಅವೇಶನ ವೇಳೆ ಸಿಎಂ ಜತೆ ಸಂತ್ರಸ್ತರ ಸಭೆ ನಡೆಸುವುದಾಗಿ ಸಚಿವ ಖಂಡ್ರೆ ಹೇಳಿದರು. ಬೇಡಿಕೆ ಸಂಬಂಧ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ. ಬೆಳಗಾವಿಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಬಂದ್ ಆಗಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್.ಕೆ) ಮತ್ತೆ ಆರಂಭಿಸುವ ಕುರಿತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಜತೆ ಮಾತನಾಡಿರುವೆ ಎಂದರು.