ಬೀದರ್: ನಮ್ಮ ದೇಶ ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಶ್ರೀಮಂತವಾಗಿದೆ ಎಂದು 87ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಚಿಂತಕ ಗೊ.ರು. ಚನ್ನಬಸಪ್ಪ ಹೇಳಿದರು.
ಕರ್ನಾಟಕ ಸಾಹಿತ್ಯ ಸಂಘದಿಂದ ನಗರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಯಾವುದೇ ದೇಶದ ಶ್ರೀಮಂತಿಕೆ ಅಳಿಯಲು ಜಿಡಿಪಿ ಮಾತ್ರ ಮಾನದಂಡವಲ್ಲ, ಅಲ್ಲಿನ ಕಲೆ, ಸಾಹಿತ್ಯ, ಸಂಸ್ಕೃತಿ ಗಟ್ಟಿಯಾಗಿರಬೇಕು ಎಂದರು.
ನಗುಮುಖ ಇಲ್ಲದವರು ಮಂತ್ರಿ, ಮಠಾಧೀಶ, ಸಾಹಿತಿ ಆಗಬಾರದು. ಎಂಥ ಕಷ್ಟದಲ್ಲೂ ನಗುಮೊಗದಿಂದ ಜೀವನ ಸಾಗಿಸುವುದು ಬಹಳ ಮುಖ್ಯ. ಇಂದಿನ ಆಧುನಿಕ ಯುಗದಲ್ಲಿ ನಮ್ಮತನವನ್ನು ಕಾಪಾಡಿಕೊಳ್ಳಬೇಕು. ಜಗತ್ತಿನಲ್ಲಿ ಹಗರಣಗಳ ಹಾವಳಿ, ಯುದ್ಧ ಭೀತಿ, ಮಹಿಳೆಯರ ಮೇಲೆ ಅತ್ಯಾಚಾರ, ಭ್ರಷ್ಟಾಚಾರ ಹೆಚ್ಚಿದೆ. ಇಂಥ ಸ್ಥಿತಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವುದು ಅತಿ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಗೊ.ರು. ಚನ್ನಬಸಪ್ಪ ಅತಿ ಬಡ ಕುಟುಂಬದಲ್ಲಿ ಜನಿಸಿ ಹತ್ತನೇ ತರಗತಿವರೆಗೆ ಅಭ್ಯಸಿಸಿ ಶ್ರೀಮಂತ ಸಾಹಿತ್ಯವನ್ನು ನಾಡಿಗೆ ಪರಿಚಯಿಸಿದ್ದಾರೆ ಎಂದು ಕೊಂಡಾಡಿದ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಈಚೆಗೆ ರಾಜ್ಯ ಸರ್ಕಾರ ಕನ್ನಡ ಬಾರದ ಹಾಗೂ ನಾಡದ್ರೋಹಿಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ರಾಜ್ಯದಲ್ಲಿ ಕನ್ನಡದ ಸಂಸ್ಕೃತಿ, ಪರಂಪರೆ ಕಡಿಮೆಯಾಗುತ್ತಿದೆ. ಯುವ ಸಮೂಹದಲ್ಲಿ ಮಾತೃತ್ವ ಹೆಚ್ಚಬೇಕು. ಅನ್ಯ ಭಾಷೆಗಳನ್ನು ಗೌರವಿಸುವುದರ ಜತೆಗೆ ಮಾತೃಭಾಷೆ ಮರೆಯಬಾರದು ಎಂದರು.
ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪದ ವಿನ್ಯಾಸ ಮಾಡಿದ ಗೊ.ರು.ಚನ್ನಬಸಪ್ಪ ಅವರನ್ನು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಬಹಳಷ್ಟು ಖುಷಿ ತಂದಿದೆ. ನಾಡಿನ ಸರ್ವ ಸಮುದಾಯಗಳಿಗೆ ಗೊರುಚ ಮಾರ್ಗದರ್ಶಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಕನ್ನಡ ನಾಡು, ನುಡಿ, ಪರಂಪರೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಗೊರುಚ ಪಾತ್ರ ಬಹಳಷ್ಟಿದೆ. ಕನ್ನಡ ಸಾಹಿತ್ಯ ಜತೆಗೆ ವಚನ ಸಾಹಿತ್ಯವನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸತೀಶ್ ಪಾಟೀಲ್ ಮಾತನಾಡಿದರು. ಲಂಡನ್ ವಿದ್ಯಾರ್ಥಿ ಕೌನ್ಸಿಲ್ ಸದಸ್ಯ ಆದೀಶ್ ವಾಲಿ, ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ರಾಷ್ಟ್ರೀಯ ಜಾನಪದ ಬುಡಕಟ್ಟು ಮತ್ತು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಇತರರಿದ್ದರು. ಸಂಜುಕುಮಾರ ಜುಮ್ಮಾ ಪ್ರಾಸ್ತಾವಿಕ ಮಾತನಾಡಿದರು. ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಸುನೀತಾ ಕೂಡ್ಲಿಕರ್ ನಿರೂಪಣೆ ಮಾಡಿದರು.