ಬೀದರ್: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿಯಿಂದ ಶೇ.97 ಮಹಿಳೆಯರಿಗೆ ಅನುಕೂಲವಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಕಾರ ಉಪಾಧ್ಯಕ್ಷ ಎಸ್.ಆರ್. ಮೆಹೆರೋಜ್ ಖಾನ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂಗನವಾಡಿ ಕಾರ್ಯಕರ್ತೆಯರ ಜತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಲು ಉತ್ಯೇಜನ ನೀಡಲಾಗಿದೆ. ಸ್ವಾವಲಂಬಿಯಾಗಿ ದುಡಿಯಲು ಹೊಲಿಗೆ ಯಂತ್ರ ಖರೀದಿ, ವಿವಿಧ ಸ್ವ-ಸಹಾಯ ಸಂಘಗಳಲ್ಲಿ ಸದಸ್ಯರಾಗಿ ಹಣ ಪಡೆದು ಸ್ವಯಂ ಉದ್ಯೋಗ ಮಾಡಲು ಸಹಕಾರಿಯಾಗಿದೆ. ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಉತ್ತಮ ರೀತಿಯಾಗಿ ನಡೆಯುತ್ತಿದ್ದು, ಯುವನಿ ಮಾತ್ರ ನಿಧಾನಗತಿಯಿಂದ ಸಾಗುತ್ತಿದೆ ಎಂದರು.
ಸರ್ಕಾರದ ಐದು ಗ್ಯಾರಂಟಿಗಳಿಂದ ಹೆಚ್ಚು ಅನುಕೂಲವಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆ, ಮಕ್ಕಳ ಶಿಕ್ಷಣ, ಸಣ್ಣ ಸಣ್ಣ ಆರೋಗ್ಯ ಸಮಸ್ಯೆ ನಿವಾರಿಸಿಕೊಳ್ಳಲು ಬಹಳಷ್ಟು ಸಹಕಾರಿಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡ ಮಾತನಾಡಿ, ಗ್ಯಾರಂಟಿಗಳಿಂದ ಮಹಿಳೆಯರ ಜತೆ ಪುರುಷರಿಗೂ ಅನುಕೂಲವಾಗಿದೆ ಎಂದು ಹೇಳಿದರು.
ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಜಾಜ್೯, ತಾಲೂಕು ಅಧ್ಯಕ್ಷ ರಿಯಾಜ್ ಚಿದ್ರಿ, ಉಪಾಧ್ಯಕ್ಷ ರಾಜು ಮಡಕೆ ಸೇರಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ಇದ್ದರು.