ಜಿಲ್ಲೆ

ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಗುರುವಿನ ಮಾರ್ಗದರ್ಶನ ಜತೆಗೆ ಸತತ ಪ್ರಯತ್ನವಿದ್ದರೆ ವಿದ್ಯಾರ್ಥಿಗಳು ಗುರಿ ಮುಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಡಿ ಜಿಲ್ಲಾಮಟ್ಟದ ಮಕ್ಕಳ ದಿನಾಚರಣೆ ನಿಮಿತ್ತ ಜಿಲ್ಲಾ ಬಾಲ ಭವನದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜೀವನದಲ್ಲಿ ಯಶಸ್ವಿ ಸಾಧಿಸಬಹುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲಿ ತನ್ನದೇ ಆದ ಪ್ರತಿಭೆ ಇದ್ದು, ಹೊರಹಾಕಲು ಸ್ಪರ್ಧೆ ಒಳ್ಳೆಯ ವೇದಿಕೆ ಎಂದು ಹೇಳಿದರು.

ಮಹಿಳಾ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ ಎಂ.ಎಸ್., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ ಮಾತನಾಡಿದರು. ಸರ್ಕಾರಿ ಬಾಲಕರ ಬಾಲಮಂದಿರ ಅಧೀಕ್ಷಕಿ ರೂಪಾ ಎಸ್.ಕೆ. ಇತರರಿದ್ದರು. ಗೌರಿಶಂಕರ ಸ್ವಾಗತಿಸಿ ನಿರೂಪಣೆ ಮಾಡಿದರು. ಜಿಲ್ಲಾ ಬಾಲ ಭವನ ಸಂಯೋಜಕ ಸೂರ್ಯಕಾಂತ ಮೋರೆ ವಂದಿಸಿದರು.

ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳು: ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಗುರುನಾನಕ್ ಸ್ಕೂಲ್ನ ಸ್ಫೂರ್ತಿ ಶಿವಾನಂದ ಹಿರೇಮಠ (ಪ್ರಥಮ), ಅನನ್ಯ ರಾಮಯ್ಯ ಸ್ವಾಮಿ (ದ್ವಿತೀಯ). ವಾದ್ಯ ಸಂಗೀತದಲ್ಲಿ ಗುರುನಾನಕ್ ಸ್ಕೂಲ್ನ ತನ್ಮಯ ಕರಣಕುಮಾರ (ಪ್ರಥಮ), ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರಾಥಮಿಕ ಶಾಲೆಯ ಗುರುಚರಣ ವಿನಯಕುಮಾರ (ದ್ವಿತೀಯ), ವಿಜ್ಞಾನದ ಸೃಜನಾತ್ಮಕ ಆವಿಷ್ಕಾರ ಸ್ಪರ್ಧೆಯಲ್ಲಿ ಗುರುನಾನಕ್ ಸ್ಕೂಲ್ನ ಶೇಖ್ ರಶೀದ್ (ಪ್ರಥಮ), ಮೀನಕೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವರ್ಷತಾ ರಾಜಕುಮಾರ (ದ್ವಿತೀಯ). ಚಿತ್ರಕಲೆ ಸ್ಪರ್ಧೆಯಲ್ಲಿ ಗುರುನಾನಕ್ ಸ್ಕೂಲ್‌ನ ಶ್ರೀಮಯಿ ದೇಶಪಾಂಡೆ (ಪ್ರಥಮ), ಅರ್ಶಿಯಾ ಸುಮೇಂದ್ರನಾಥ ಬಿಸ್ವಾಸ್ (ದ್ವಿತೀಯ) ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.