ಜಿಲ್ಲೆ

ಬೀದರ್ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ

ರೇವಣಸಿದ್ದಪ್ಪ ಪಾಟೀಲ್
ಬೀದರ್: ಏಕಲ್ ಅಭಿಯಾನದ ರಾಜ್ಯ ಘಟಕದ ವತಿಯಿಂದ ಬೆಂಗಳೂರಿನಲ್ಲಿ ಭಾನುವಾರ ನಡೆದ ಏಕಲ್ ಖೇದ್ ಕೂದ್ ಉತ್ಸವದ ವಿವಿಧ ಸ್ಪರ್ಧೆಗಳಲ್ಲಿ ಬೀದರ್‍ನ ಕ್ರೀಡಾಪಟುಗಳು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಬಡ್ಡಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಜಯ ರಾಮ ನೇತೃತ್ವದ ತಂಡ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿತು. 100 ಮೀಟರ್ ಓಟದ ಸ್ಪರ್ಧೆಯಲ್ಲಿ ಬೀದರ್ ತಾಲ್ಲೂಕಿನ ನಂದಗಾಂವ್ ಗ್ರಾಮದ ಸುಹಾಸಿನಿ, ಎತ್ತರ ಜಿಗಿತದಲ್ಲಿ ಮಂದಕನಳ್ಳಿಯ ಬಸವರಾಜ ಹಾಗೂ ಯೋಗಾಸನದಲ್ಲಿ ಕಂಗಟಿ ಗ್ರಾಮದ ಸುಹಾಸಿನಿ ಆಚಾರ್ಯ ಪ್ರಥಮ ಸ್ಥಾನ ಪಡೆದರು. ಉತ್ತರ ಕರ್ನಾಟಕದ ಆರು ಹಾಗೂ ದಕ್ಷಿಣ ಕರ್ನಾಟಕದ ಎರಡು ಜಿಲ್ಲೆಗಳು ಸೇರಿದಂತೆ ರಾಜ್ಯದ 8 ಜಿಲ್ಲೆಗಳ ಕ್ರೀಡಾಪಟುಗಳು ಉತ್ಸವದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಮಟ್ಟದ ಕ್ರೀಡಾಕೂಟ ಫೆಬ್ರುವರಿ 8 ರಿಂದ 10 ರ ವರೆಗೆ ಓರಿಸಾದ ಭುವನೇಶ್ವರದಲ್ಲಿ ನಡೆಯಲಿದೆ. ಏಕಲ್ ಖೇಲ್ ಕೂದ್ ಉತ್ಸವದಲ್ಲಿ ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ತೋರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಏಕಲ್ ಅಭಿಯಾನದ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಅಳ್ಳೆ ತಿಳಿಸಿದರು. ಏಕಲ್ ಅಭಿಯಾನವು ಗ್ರಾಮೀಣ ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತ ಬಂದಿದೆ. ಅದರ ಫಲವಾಗಿ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈಯುತ್ತಿದ್ದಾರೆ. ಜಿಲ್ಲೆಯ ಹೆಚ್ಚಿನ ಕ್ರೀಡಾಪಟುಗಳು ಅಥ್ಲೆಟಿಕ್ಸ್‍ನಲ್ಲಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶ ಅಭಿಯಾನದ್ದಾಗಿದೆ ಎಂದು ಹೇಳಿದರು.