ಜಿಲ್ಲೆ

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ 16ರಂದು

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕನಕದಾಸರ ಜಯಂತಿ ಪ್ರಯುಕ್ತ ಜಿಲ್ಲಾ ಕಾಳಿದಾಸ ಗೊಂಡ ಯುವಕ ಸಂಘದ ವತಿಯಿಂದ ನಗರದ ನೆಹರೂ ಕ್ರೀಡಾಂಗಣ ಹತ್ತಿರದ ಸಾಯಿ ಆದರ್ಶ ಶಾಲೆಯಲ್ಲಿ ನವೆಂಬರ್ 16 ರಂದು ಮಧ್ಯಾಹ್ನ 2 ರಿಂದ 3 ರ ವರೆಗೆ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

‘ಭಕ್ತ ಕನಕದಾಸರ ಜೀವನ ಮತ್ತು ಸಮಾಜಕ್ಕೆ ಅವರ ಕೊಡುಗೆ’ ಕುರಿತ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ.

ವಿಜೇತರಿಗೆ ರೂ. 3 ಸಾವಿರ ಪ್ರಥಮ, ರೂ. 2 ಸಾವಿರ ದ್ವಿತೀಯ ಹಾಗೂ ರೂ. 1 ಸಾವಿರ ತೃತೀಯ ಬಹುಮಾನ ಹಾಗೂ ಪ್ರಮಾಣ ಪತ್ರ ದೊರೆಯಲಿದೆ.

ನ. 18 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿರುವ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸಂತೋಷ ಬಗದಲ್ ಹಾಗೂ ಉಪಾಧ್ಯಕ್ಷ ಕಲ್ಲಪ್ಪ ಯರನಳ್ಳಿ ತಿಳಿಸಿದ್ದಾರೆ.