ಬೀದರ್: ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾದ ನೋಟಿಸ್ ಹಿಂಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ತಾನಾಜಿ ಸಗರ್ ತಿಳಿಸಿದ್ದಾರೆ.
ಜಮೀನಿನ ಪಹಣಿಗಳಲ್ಲಿ ವಕ್ಫ್ ಪದ ಸೇರಿಕೊಂಡಿದ್ದಕ್ಕೆ ಹಾಗೂ ನೋಟಿಸ್ ನೀಡಿದ್ದಕ್ಕೆ ಅನೇಕ ರೈತರು ಆತಂಕಕ್ಕೆ ಒಳಗಾಗಿದ್ದರು. ಸರ್ಕಾರದ ಅಧಿಕೃತ ಆದೇಶದಿಂದ ನಿರಾಳರಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ವಕ್ಫ್ ಹೆಸರಿಗೆ ರೈತರು ಹಾಗೂ ಇತರರ ಆಸ್ತಿ ಖಾತೆ ಮಾಡಲಾಗುತ್ತಿದೆ ಎಂಬ ದೂರುಗಳು ಎಲ್ಲೆಡೆ ಕೇಳಿ ಬಂದಿದ್ದವು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮ್ಯೂಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ಹಿಂಪಡೆಯಬೇಕು. ಮ್ಯುಟೇಷನ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಈಗಾಗಲೇ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮ ಜರುಗಿಸಬಾರದು ಎಂದು ಸೂಚನೆ ನೀಡಿರುವುದು ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಹೇಳಿದ್ದಾರೆ.