ಬೀದರ್: ಭ್ರಷ್ಟಾಚಾರದಲ್ಲಿ ತೊಡಗಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೌತಮ ಅರಳಿ ಹಾಗೂ ಅಧೀಕ್ಷಕಿ ಪದ್ಮಾವತಿ ವಿರುದ್ಧ ತನಿಖೆ ನಡೆಸಬೇಕು ಎಂದು ದ್ರಾವಿಡ್ ಕ್ರಾಂತಿ ಯುವಸೇನೆ ಸಂಸ್ಥಾಪಕ ಅಧ್ಯಕ್ಷ ಗೌತಮ ಪ್ರಸಾದ ಆಗ್ರಹಿಸಿದರು.
ಈ ಇಬ್ಬರು ಅಧಿಕಾರಿಗಳು ಬೋಗಸ್ ಬಿಲ್ ಸೃಷ್ಟಿಸಿ ಅಕ್ರಮ ಎಸಗುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಪದ್ಮಾವತಿ ಅವರು ಒಳಾಂಗಣ ಕ್ರೀಡಾಂಗಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸದೆ ಬೋಗಸ್ ಬಿಲ್ ಸೃಷ್ಟಿಸಿ ಭ್ರಷ್ಟಾಚಾರ ಮಾಡಿದ್ದಾರೆ. ಬಾಸ್ಕೆಟ್ ಬಾಲ್ ಕ್ರೀಡಾಂಗಣದ ಪೇಂಟಿಂಗ್ ಮತ್ತು ಶಿಥಿಲಗೊಂಡ ಈಜುಕೊಳ ದುರಸ್ತಿ ಮಾಡಿಸದೆ ಬಿಲ್ ಎತ್ತಲಾಗಿದೆ. ಸ್ವಾಮಿ ವಿವೇಕಾನಂದ ಜಯಂತಿ ಹೆಸರಿನಲ್ಲಿ ಒಂದು ದಿನ ಕಾರ್ಯಕ್ರಮ ಮಾಡಿ ಯುವ ಸಪ್ತಾಹ ಹೆಸರಿನಲ್ಲಿ ಹಣ ದುರ್ಬಳಕೆ, ಈಜುಕೊಳದ ನಿರ್ವಹಣೆ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡದೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಡಾ.ಅರಳಿ ಅವರು ವಿಧಾನಸಭೆ, ಲೋಕಸಭೆ ಚುನಾವಣೆ ನೋಡಲ್ ಅಧಿಕಾರಿಯಾಗಿ ಸಾರ್ವಜನಿಕರು ಮತ್ತು ಯುವ ಮತದಾರರಲ್ಲಿ ಚುನಾವಣಾ ಅರಿವು ಮೂಡಿಸುವ ಕಾರ್ಯಕ್ರಮದ ಖರ್ಚು, ವೆಚ್ಚ ಅಕ್ರಮ ಎಸಗಿದ್ದಾರೆ. ಕಾರ್ಯಕ್ರಮ ಮಾಡಲು ಕಿರಿಯ ಅಧಿಕಾರಿಗಳಿಗೆ ಖರ್ಚು ಕೊಡದೆ ಅಂದಾಜು 10 ಲಕ್ಷ ರೂ. ಲೂಟಿ ಮಾಡಿದ್ದಾರೆ ಎಂದು ಆಪಾದಿಸಿದರು.
ಅರಳಿ ಅವರು ಎರಡು ದಶಕದಿಂದ ಪಶುವೈದ್ಯಕೀಯ ಇಲಾಖೆ, ಜಿಪಂ ನೋಡಲ್ ಅಧಿಕಾರಿ, ಸ್ವಚ್ಛ ಭಾರತ ಮಿಷನ್ ನೋಡಲ್ ಅಧಿಕಾರಿ ಜತೆಗೆ ಯುವ ಸಬಲೀಕರಣ ಸೇರಿ ನಾಲ್ಕು ಇಲಾಖೆ ಪ್ರಭಾರ ವಹಿಸಿಕೊಂಡು ಎಲ್ಲೆಡೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ದೂರಿದರು.
ಸಾಯಿ ಸಿಂಧೆ, ಮಹೇಂದ್ರಕುಮಾರ ಹೊಸಮನಿ, ಕಲ್ಯಾಣರಾವ ಗುನ್ನಳ್ಳಿಕರ್, ಜೈಭೀಮ ಕ್ಯಾದೆ, ಸಂಜುಕುಮಾರ ಲಕ್ಷ್ಮೀದೊಡ್ಡಿ ಇತರರಿದ್ದರು.