ಬೀದರ್: ಶಾಂತಿ, ಸೌಹಾರ್ದ ಮೂಲಕ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹೋರಾಟಗಳು ಇಂದಿಗೂ ಪ್ರಪಂಚಕ್ಕೆ ಮಾದರಿಯಾಗಿವೆ ಎಂದು ನೂತನ ನಗರ ಠಾಣೆ ಸಿಪಿಐ ವಿಜಕುಮಾರ ಬಾವಗಿ ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜಾನಪದ ಕಲಾವಿದರ ಬಳಗದ ಸಹಯೋಗದಡಿ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಾಂಧೀಜಿ ವಿಚಾರ ಪ್ರಸ್ತುತತೆ ಯುವ ಜನತೆಗೆ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಗಾಂಧೀಜಿ ಭಾರತಕ್ಕಷ್ಟೇ ಸೀಮಿತವಾಗಿರದೆ ಜಗತ್ತಿಗೆ ಮಾರ್ಗದರ್ಶಕರಾದವರು. ಸತ್ಯ, ಶಾಂತಿ, ಅಹಿಂಸೆ ಮಂತ್ರಗಳೊಂದಿಗೆ ದೇಶವನ್ನು ಶತಮಾನಗಳ ದಾಸ್ಯದಿಂದ ವಿಮುಕ್ತಿಗೊಳಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು.
ದೇಶದುದ್ದಕ್ಕೂ ಸಂಚರಿಸಿ ಜನಸಾಮಾನ್ಯರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗುವಂತೆ ಪ್ರೇರಣೆ ನೀಡಿದರು. ಇಂಥ ನಾಯಕತ್ವ ಗುಣಗಳಿಂದ ಅವರನ್ನು ಮಹಾತ್ಮ, ರಾಷ್ಟ್ರಪಿತ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತಿದೆ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಕಾರ್ಯಕ್ರಮ ಸಂಘಟಕಿ ಡಾ.ಅಬಿದ್ ಬೇಗಂ ಮಾತನಾಡಿ, ಮಹಿಳೆಯರು ಕೇವಲ ಅಕ್ಷರದ ಶಿಕ್ಷಣ ಪಡೆದರೆ ಸಾಲದು, ಜೀವನದ ಶಿಕ್ಷಣ ಪಡೆಯಬೇಕು. ಹೆಣ್ಣು ಮಕ್ಕಳಲ್ಲಿ ಸ್ಪೂರ್ತಿ ತುಂಬಬೇಕು ಎಂಬ ಸದುದ್ದೇಶದಿಂದ ಮಹಿಳಾ ಕಾಲೇಜುಗಳಲ್ಲಿ ಹೆಚ್ಚಾಗಿ ಇಂಥ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಮಹಾತ್ಮ ಗಾಂಧೀಜಿ ವಿಚಾರಧಾರೆಗಳನ್ನು ಮಕ್ಕಳಲ್ಲಿ ಬಿತ್ತುವುದು ಕಾರ್ಯಕ್ರಮದ ಉದ್ದೇಶ ಎಂದರು.
ಸತ್ಯ, ಅಹಿಂಸೆ ಮತ್ತು ಸರಳತೆಯ ಬದುಕಿನ ಮೂಲಕ ಸ್ವಾತಂತ್ರ್ಯ ಚಳವಳಿ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧಿ ಜೀವನ ಎಲ್ಲರಿಗೂ ಮಾದರಿ. ಇಂದಿನ ಯುವ ಸಮೂಹ, ಮಕ್ಕಳಿಗೆ ಗಾಂಧೀಜಿ ಸಂದೇಶ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪಾರ್ವತಿ ಸೋನಾರೆ ಮಾತನಾಡಿ, ಜಗತ್ತಿಗೆ ಶಾಂತಿ ಸಂದೇಶ ನೀಡಿದ ಮಹಾತ್ಮ ಗಾಂಧೀಜಿ ಜೀವನ ಚರಿತ್ರೆಯನ್ನು ಮಕ್ಕಳು ಓದಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷ ಭಾರತಿ ವಸ್ತ್ರದ್, ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮನೋಜಕುಮಾರ ಕುಲಕರ್ಣಿ, ಎನ್ಎಸ್ಎಸ್ ಅಕಾರಿ ಶ್ರೀನಿವಾಸರಡ್ಡಿ, ಡಾ.ವಿದ್ಯಾ ಪಾಟೀಲ್, ವಿಜಯಲಕ್ಷ್ಮೀ, ಯೇಸುದಾಸ ಅಲಿಯಂಬುರೆ, ಸುನೀಲ ಭಾವಿಕಟ್ಟಿ, ಚಂದ್ರಕಾಂತ ಹಳ್ಳಿಖೇಡಕರ್, ಮಾರುತಿ ಏಣಕುರೆ, ಕುಪೇಂದ್ರ ಹೊಸಮನಿ, ಅಂಬರೇಶ್ ಮಲ್ಲೇಶಿ, ಬಾಲಾಜಿ ಜಬಾಡೆ ಇತರರಿದ್ದರು.