ಜಿಲ್ಲೆ

ಮನಸ್ಸಿನ ಶುಚಿಗಾಗಿ ಪ್ರವಚನ ಆಲಿಸಿ

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ಬಸವಾದಿ ಶರಣರು, ಸಂತರು, ಮಹಾತ್ಮರ ವಾಣಿ ಮತ್ತು ಪ್ರವಚನಗಳು ಮನಸ್ಸು ಶುಚಿಗೊಳಿಸುತ್ತವೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ತ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ವಚನಗಳಲ್ಲಿ ಆರೋಗ್ಯ ಅಧ್ಯಾತ್ಮ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶರಣರ ಸಂದೇಶ ಮತ್ತು ಪ್ರವಚನ ಆಲಿಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವ ಮೌಲಿಕ ವಿಚಾರಗಳನ್ನು ಶ್ರೀ ಬಸವಾನಂದ ಸ್ವಾಮೀಜಿ ಎರಡು ವಾರ ಹೇಳಿಕೊಡುವರು. ಅವರ ಪ್ರವಚನ ಆಲಿಸುವ ಮೂಲಕ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಮನಗುಂಡಿಯ ಶ್ರೀ ಗುರುಬಸವ ಮಹಾಮನೆ ಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ, ಇಂದಿನ ಆಧುನಿಕ ಯುಗದ ಜಂಜಾಟದಲ್ಲಿ ಮಾಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ಬಹಿರಂಗದ ಶ್ರೀಮಂತಿಕೆ ಬಯಸುವಲ್ಲಿ ಅಂತರಂಗದ ಸುಖ-ಶಾಂತಿ ಮಾಯಾವಾಗುತ್ತಿದೆ. ಪ್ರಸ್ತುತ ಎಲ್ಲರಿಗೂ ಬೇಕಿರುವುದು ನೆಮ್ಮದಿ, ಶಾಂತಿ, ಸಮಾಧಾನ. ಬಸವಾದಿ ಶರಣರ ವಚನಗಳು ಮನಸ್ಸಿನ ಶಾಂತಿಗೆ ದಿವ್ಯ ಔಷಧ ಎಂದು ಹೇಳಿದರು.

ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು, ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರು ಬಸವ ಗುರುಪೂಜೆ ನೆರವೇರಿಸಿದರು. ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಅಲಿಸಾಬ್, ಪ್ರಮುಖರಾದ ಜಗನ್ನಾಥರಡ್ಡಿ, ಶಶಿಕಾಂತ ದುರ್ಗೆ, ಡಾ.ಎಸ್.ಬಿ. ದುರ್ಗೆ, ಸುಶೀಲಮ್ಮ ಹುಣಸಿಮರದ ಇತರರಿದ್ದರು. ಸೋನಾಲಿ ಶಿವರಾಜ ನೀಲಕಂಠೆ ಸ್ವಾಗತಿಸಿದರು. ವಿಶ್ವನಾಥ ಮುಕ್ತಾ ನಿರೂಪಣೆ ಮಾಡಿದರು.

21ರವರೆಗೆ ಪ್ರವಚನ

ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ತ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ನ.21ರವರೆಗೆ ನಿತ್ಯ ಸಂಜೆ 5.30ಕ್ಕೆ ಮನಗುಂಡಿಯ ಶ್ರೀ ಗುರುಬಸವ ಮಹಾಮನೆ ಶ್ರೀ ಬಸವಾನಂದ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ.