ಜಿಲ್ಲೆ

ಹೊನ್ನಿಕೇರಿ ಸಿದ್ಧೇಶ್ವರ ದೇಗುಲದಲ್ಲಿ ದೀಪೋತ್ಸವ

ರೇವಣಸಿದ್ದಪ್ಪ ಪಾಟೀಲ್

ಬೀದರ್: ದೀಪಾವಳಿ ನಿಮಿತ್ತ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದಲ್ಲಿ ಈಚೆಗೆ ಶ್ರದ್ಧೆ, ಭಕ್ತಿಯಿಂದ ದೀಪೋತ್ಸವ ನಡೆಯಿತು.

ದೇವಸ್ಥಾನದ ಆವರಣ, ಮಲ್ಲಗಂಬ, ಪುಷ್ಕರಣಿ, ಮೆಟ್ಟಿಲುಗಳು ಮುಂತಾದ ಕಡೆಗಳಲ್ಲಿ ಮಣ್ಣಿನ ಹಣತೆಗಳಲ್ಲಿ ಎಣ್ಣೆ ಹಾಕಿ ದೀಪ ಬೆಳಗಿಸಲಾಯಿತು. ಬಳಿಕ ಸಿದ್ಧೇಶ್ವರರು, ಮಲ್ಲಿಕಾರ್ಜುನ ದೇವರಿಗೆ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಲಾಯಿತು.

ಗ್ರಾಮದಲ್ಲಿ ಪ್ರತಿ ವರ್ಷ ದೀಪಾವಳಿಯ ಬಲಿಪಾಡ್ಯದ ಪ್ರಯುಕ್ತ ದೀಪೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ 811ನೇ ದೀಪೋತ್ಸವ ಸಂಭ್ರಮದಿಂದ ನೆರವೇರಿದೆ ಎಂದು ಪ್ರಶಾಂತಯ್ಯ ಸ್ವಾಮಿ ಪೂಜಾರಿ ತಿಳಿಸಿದರು.

ದೇವಸ್ಥಾನದ ಪೀಠಾಧಿಕಾರಿಯಾಗಿದ್ದ ಸಿದ್ಧಲಿಂಗಯ್ಯ ಸ್ವಾಮಿ ಪೂಜಾರಿ ಅವರ ನಿಧನದ ನಂತರ ಅವರ ಕಿರಿಯ ಪುತ್ರ ನಾಗಯ್ಯ ಸ್ವಾಮಿ ಪೂಜಾರಿ ದೀಪೋತ್ಸವ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ಸಂಪ್ರದಾಯದಂತೆ ಗ್ರಾಮದ ಹಳೆಯ ಪೀಠಾಧಿಪತಿ ಮನೆಯಿಂದ ದೇವಸ್ಥಾನಕ್ಕೆ ಬಂದು ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು ಎಂದು ತಿಳಿಸಿದರು.

ಸಿದ್ಧಯ್ಯ ನಾಗಯ್ಯ ಸ್ವಾಮಿ, ಲಕ್ಷ್ಮೀಬಾಯಿ ತೀರ್ಥಯಾ, ಗೋದಾವರಿ ನಾಗಯ್ಯ, ಸಿದ್ಧಮ್ಮ ಮಲ್ಲಯ್ಯ, ಗದಗಯ್ಯ, ಗುರುಶಾಂತಯ್ಯ, ಶ್ರೀಕಾಂತಯ್ಯ, ಅಭಿಷೇಕ, ಆಕಾಶ, ವಿವೇಕಾನಂದ ಪಾಲ್ಗೊಂಡಿದ್ದರು.