ಜಿಲ್ಲೆ

ಪಹಣಿಯಲ್ಲಿ ವಕ್ಫ್ ಹೆಸರು ಕೈಬಿಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲೆಯ ವಿವಿಧೆಡೆ ಜಮೀನಿನ ಪಹಣಿಯಲ್ಲಿ ವಕ್ಫ್ ಮಂಡಳಿ ಎಂದು ನಮೂದಿಸಿದ್ದು, ಕೂಡಲೇ ಕೈಬಿಡಬೇಕೆಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

ಸಿಎಂಗೆ ಬರೆದ ಮನವಿಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದ ಸಂಘದ ಪದಾಕಾರಿಗಳು, ಸಾವಿರಾರು ಎಕರೆ ಭೂಮಿ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ಸೇರಿಸಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಚಟ್ನಳ್ಳಿ ಗ್ರಾಮದ ಸುಮಾರು 960 ಎಕರೆ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಲಾಗಿದೆ. ಹೊಲದ ಪಹಣಿ ಹಾಗೂ ನಿವೇಶನ ಜಾಗದ ದಾಖಲೆಯಲ್ಲಿ ಸೇರಿಸಿದ್ದ ವಕ್ ಹೆಸರು ಕೈಬಿಡಬೇಕು. ನಿರ್ಲಕ್ಷ್ಯ ಮಾಡಿದರೆ ನ.11ರಂದು ಬೆಳಗ್ಗೆ 11ಕ್ಕೆ ಗಣೇಶ ಮೈದಾನದಿಂದ ಡಿಸಿ ಕಚೇರಿವರೆಗೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಮುಖರಾದ ಸತೀಶ್ ನನ್ನೂರೆ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡಿ, ಮಲ್ಲಿಕಾರ್ಜುನ ಚಕ್ಕಿ, ರಾಜಕುಮಾರ ಪಾಟೀಲ್ ಇತರರಿದ್ದರು.