ಭಾಲ್ಕಿ: ಕನ್ನಡ ಸಾಹಿತ್ಯವು ಜಗತ್ತಿನ ಭಾಷಾ ಪ್ರಪಂಚದಲ್ಲಿ ಶ್ರೀಮಂತ ಭಾಷೆಯಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಆದಿಕವಿ ಪಂಪ, ಪೊನ್ನ, ರನ್ನ ರಿಂದ ಚಂಪು ಸಾಹಿತ್ಯ ಬೆಳೆದು ಬಂದು ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ನಂತರ 12ನೇ ಶತಮಾನದ ಶಿವ ಶರಣರಿಂದ ರಚನೆಯಾದ ವಚನ ಸಾಹಿತ್ಯ ವಿಶ್ವಕ್ಕೆ ಮೌಲಿಕವಾದ ಕೊಡುಗೆ ನೀಡಿ ಜನಸಾಮಾನ್ಯರ ಸಾಹಿತ್ಯವಾಗಿ ಶ್ರೇಷ್ಠ ಸಾಹಿತ್ಯವೆಂದು ತೋರಿಸಿಕೊಟ್ಟಿತು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಅಪಾರವಾದ ಕಾವ್ಯ ಸುಧೆ ಒಳಗೊಂಡಿದ್ದು, ಕಾವ್ಯ ಸಂಸಾರದಲ್ಲಿ ಕವಿಯೇ ಬ್ರಹ್ಮ ಅವನ ಇಷ್ಟದಂತೆ ಇಡೀ ವಿಶ್ವವೇ ಪರಿವರ್ತನೆ ಪಡೆಯುತ್ತಿದೆ. ರನ್ನನ ಗದಾಯುದ್ಧ, ಕೇಶಿರಾಜನ ಶಬ್ದಮಣಿ ದರ್ಪಣ, ಜನ್ನನ ಯಶೋಧರ ಚರಿತೆ, ದುರ್ಗಸಿಂಹನ ಪಂಚತಂತ್ರ ಕಥೆಗಳು ಸೇರಿದಂತೆ ಇತರ ಶ್ರೇಷ್ಠ ಕೃತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ ಎಂದರು.
ವಿಟಿಯು ಬೆಂಗಳೂರಿನ ಉಪನ್ಯಾಸಕ ಶ್ರೀರಾಮ ಮುಸ್ತಾಪುರೆ ಮಾತನಾಡಿ, ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ದೊರೆತ ಗುಣಾತ್ಮಕ, ಸಂಸ್ಕಾರ ಭರಿತ ಶಿಕ್ಷಣ ನನ್ನನ್ನು ಉನ್ನತ ಸ್ಥಾನಕ್ಕೆ ಬೆಳೆಸಿದೆ ಎಂದು ಬಣ್ಣಿಸಿದರು.
ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ನಾಗೇಶ ಬಿರಾದಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ರಿಕೆಟ್ ಆಟಗಾರ್ತಿ ಅದಿತಿ ವೀರಶೆಟ್ಟಿ ಬಕ್ಕಾ ಅವರನ್ನು ಸನ್ಮಾನಿಸಲಾಯಿತು.
ಬಸವಲಿಂಗ ಸ್ವಾಮೀಜಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಆಡಳಿತಾಧಿಕಾರಿ ಮೋಹನರೆಡ್ಡಿ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಮುಖ್ಯ ಶಿಕ್ಷಕರಾದ ಮಹೇಶ ಮಹಾರಾಜ್, ಮಹೇಶ ಕುಲಕರ್ಣಿ, ಲಕ್ಷ್ಮಣ ಮೇತ್ರೆ, ಬಸವ ಜಯಂತಿ ಇದ್ದರು.