ಬೀದರ್: ಬಸವಣ್ಣ ಹಾಗೂ ಅಹಂಕಾರ ತದ್ವಿರುದ್ಧ ಪದಗಳು. ಬಸವಣ್ಣನವರಿಗೂ ಪುರುಷ ಅಹಂಕಾರದಿಂದ ಹೊರ ಬರಲು ಆಗಿರಲಿಲ್ಲ ಎಂಬ ಸಾಹಿತಿ ವಿನಯಾ ಒಕ್ಕುಂದ ಅವರ ಹೇಳಿಕೆ ಅರ್ಥಹೀನ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಪ್ರತಿಕ್ರಿಯಿಸಿದ್ದಾರೆ.
ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿ, ವರ್ಗ, ವರ್ಣ, ಲಿಂಗ ಭೇದ ರಹಿತ ಧರ್ಮ ಸಹಿತ ಕಲ್ಯಾಣ ರಾಜ್ಯ ಕಟ್ಟಿದ್ದರು. ಸ್ತ್ರೀ- ಪುರುಷರಲ್ಲಿ ಯಾವುದೇ ಭೇದ ಮಾಡಿರಲಿಲ್ಲ. ಮಹಿಳೆಯರಿಗೂ ಪುರುಷರಿಗೆ ಸರಿ ಸಮನಾದ ಸ್ವಾತಂತ್ರ್ಯ ಹಾಗೂ ಗೌರವಗಳನ್ನು ಕಲ್ಪಿಸಿಕೊಟ್ಟಿದ್ದರು. ಅಂತೆಯೇ ಅವರನ್ನು ಸ್ತ್ರೀ ಸ್ವಾತಂತ್ರ್ಯದ ರೂವಾರಿ ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಅತ್ಯುನ್ನತ ಗೌರವ, ಅಧಿಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಕೊಟ್ಟ ಕಾಲ ಘಟ್ಟ 12ನೇ ಶತಮಾನ. ಬಸವಣ್ಣನವರು ಆಗ ಆಯ್ದಕ್ಕಿ ಲಕ್ಕಮ್ಮ, ಕಸಗುಡಿಸುವ ಸತ್ಯಕ್ಕ, ಸೂಳೆ ಸಂಕವ್ವ ಆದಿಯಾಗಿ ಅನೇಕ ಶರಣೆಯರಿಗೆ ಅನುಭವ ಮಂಟಪದಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಮುಕ್ತ ಅವಕಾಶ ಕಲ್ಪಿಸಿದ್ದರು ಎಂದು ತಿಳಿಸಿದ್ದಾರೆ.
ಶರಣರಲ್ಲಿ ಲಿಂಗ ಭೇದ ಇರಲಿಲ್ಲ ಎನ್ನುವುದಕ್ಕೆ ಮೊಲೆ ಮೂಡಿದಡೆ ಹೆಣ್ಣೆಂಬರು, ಮೀಸೆ ಮೂಡಿದಡೆ ಗಂಡೆಂಬರು, ಒಳಗಿರುವ ಆತ್ಮ, ಗಂಡೂ ಅಲ್ಲ, ಹೆಣ್ಣು ಅಲ್ಲ ಎಂಬ ವಚನವೇ ನಿದರ್ಶನ. ಬಸವಣ್ಣ ತನಗಿಂತ ಕಿರಿಯ ವಯಸ್ಸಿನ ಅಕ್ಕ ಮಹಾದೇವಿ ಅವರನ್ನು ಅಕ್ಕ ಎಂದು ಸಂಬೋಧಿಸಿದ್ದರು. ಒಂದೆಡೆ ನೀಲಾಂಬಿಕೆಯೇ ಬಸವಣ್ಣ ನನಗೆ ಶಿಶುವಾದ, ನಾನು ಬಸವಣ್ಣನಿಗೆ ಶಿಶುವಾದೆ ಎಂದು ನುಡಿದಿದ್ದಾರೆ ಎಂದು ಹೇಳಿದ್ದಾರೆ.
ಹಿಂದೆ ಹೆಣ್ಣನ್ನು ಮಾಯೆ ಎನ್ನಲಾಗುತ್ತಿತ್ತು. ಆದರೆ, ಬಸವಣ್ಣನವರು ಅದನ್ನು ಅಲ್ಲಗಳೆದರು. ‘ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, ಇದಾವ ಪರಿಯಲ್ಲಿ ಕಾಡಿತ್ತು ಮಾಯೆ, ಈ ಮಾಯೆಯ ಕಳವಡೆ ಎನ್ನವಳಲ್ಲ ನೀವೆ ಬಲ್ಲಿರಿ ಕೂಡಲ ಸಂಗಮ ದೇವ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಜನ್ಮಕೊಟ್ಟ ತಾಯಿಯಾಗಿ, ಪ್ರೀತಿಯ ಮಗಳಾಗಿ, ಜೊತೆ ನಡೆವ ಪತ್ನಿಯಾಗಿ ಪುರುಷರ ಬಾಳು ಬೆಳಗುವ ಸ್ತ್ರೀಯನ್ನು ಮಾಯೆ ಎಂದು ನಿರಾಕರಿಸುವುದು ತಪ್ಪು ಎಂದು ಸಾರಿದ್ದರು ಎಂದಿದ್ದಾರೆ.
ಬಸವಣ್ಣನವರ ಕುರಿತು ಸಂಶೋಧನೆ ಮಾಡಿದವರು, ವಿದ್ವಾಂಸರು, ಬಸವಣ್ಣನವರು ಹೆಣ್ಣಿಗೆ ಕೊಟ್ಟ ಗೌರವವನ್ನು ಕೊಂಡಾಡಿದ್ದಾರೆ. ಎನಗಿಂತ ಕಿರಿಯರಿಲ್ಲ ಎಂದಿದ್ದ ಬಸವಣ್ಣನವರಲ್ಲಿ ಯಾರೂ ಕಾಣದ ಅಹಂಕಾರವನ್ನು ವಿನಯಾ ಹೇಗೆ ಕಂಡರು ಎಂದು ಪ್ರಶ್ನಿಸಿದ್ದಾರೆ.
ಬಸವಣ್ಣನವರ ಘನತೆಗೆ ಧಕ್ಕೆ ಉಂಟು ಮಾಡುವ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.