ಜಿಲ್ಲೆ

ಗಮನ ಸೆಳೆದ ಸಮಾಜ, ವಿಜ್ಞಾನ ವಸ್ತು ಪ್ರದರ್ಶನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ನೌಬಾದ್ ಸಮೀಪ ಚೊಂಡಿ ರಸ್ತೆಯಲ್ಲಿ ಇರುವ ಇನ್ಫಿನಿಟಿ ಪಬ್ಲಿಕ್ ಶಾಲೆಯಲ್ಲಿ ನಡೆದ ಸಮಾಜ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸ್ವತಃ ತಯಾರಿಸಿದ್ದ ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಕಂಪ್ಯೂಟರ್, ಹಿಂದಿ, ಪಿ.ಪಿ.ಟಿ ಮೊದಲಾದ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.

ಸೌರಶಕ್ತಿ ಉಪಕರಣ, ಪರಿಸರ, ನೀರಿನ ಸಂರಕ್ಷಣೆ, ಸ್ವಚ್ಛತೆ ಅಗತ್ಯತೆ ಕುರಿತು ಮಾಹಿತಿ ನೀಡಿದರು. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಕವನ ವಾಚಿಸಿದರು. ಭಾಷಣ, ನಾಟಕ ಸಹ ಪ್ರದರ್ಶಿಸಿ ಸೈ ಎನಿಸಿಕೊಂಡರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಟಿ.ಆರ್. ದೊಡ್ಡೆ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ತೋಟಗಾರಿಕೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ವೀರೇಂದ್ರ ಪ್ರತಾಪ್‍ಸಿಂಗ್ ಮಾತನಾಡಿ, ವಿಜ್ಞಾನ ಮಾನವ ಜೀವನಕ್ಕೆ ಬಹಳ ಅವಶ್ಯಕವಾಗಿದೆ ಎಂದು ತಿಳಿಸಿದರು.

ಉಪ ವಿಜ್ಞಾನ ಕೇಂದ್ರದ ಸಾಯಿನಾಥ ನೀತುರ್ಕರ್, ಶಿಕ್ಷಣ ಇಲಾಖೆಯ ವಲಯ ಸಂಪನ್ಮೂಲ ವ್ಯಕ್ತಿ ಶ್ರೀದೇವಿ ಹೂಗಾರ, ನಿರಂತರ ಫೌಂಡೇಷನ್ ಟ್ರಸ್ಟಿ ಲಕ್ಷ್ಮಿ ಮುಗಳಿ, ಪ್ರಾಚಾರ್ಯ ಡಾ. ದತ್ತರಾಜ ಕುಲಕರ್ಣಿ ಮತ್ತಿತರರು ಇದ್ದರು.

ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.