ಜಿಲ್ಲೆ

ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಔರಾದ್ ಗೆ 5ನೇ ಸ್ಥಾನ

ರೇವಣಸಿದ್ದಪ್ಪ ಪಾಟೀಲ್

ಔರಾದ್: ಬಿಜೆಪಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದಲ್ಲಿ ಔರಾದ್ ಮಂಡಲ ರಾಜ್ಯದಲ್ಲಿ ಐದನೇ ಸ್ಥಾನ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಜಗನ್ನಾಥ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚವ್ಹಾಣ್ ಅವರನ್ನು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸನ್ಮಾನಿಸಿದರು. ಔರಾದ್ ಮಂಡಲದಲ್ಲಿ ಕಾರ್ಯಕರ್ತರು ಪ್ರತಿ ಬೂತ್ನಲ್ಲಿ ಓಡಾಡಿ ನಿರಂತರ ಶ್ರಮ ವಹಿಸಿದ್ದರಿಂದ ಅಭಿಯಾನ ಯಶಸ್ವಿಯಾಗಿದೆ. ಈ ಸನ್ಮಾನವನ್ನು ಮಂಡಲ ಕಾರ್ಯಕರ್ತರಿಗೆ ಅರ್ಪಿಸುವೆ ಎಂದು ಚವ್ಹಾಣ್ ಹೇಳಿದರು.

ಅಭಿಯಾನ ಆರಂಭವಾದ ನಂತರ ಕಾರ್ಯಾಗಾರ ಆಯೋಜಿಸಿ ಕಾರ್ಯಕರ್ತರು ಹೇಗೆ ಕೆಲಸ ಮಾಡಬೇಕೆಂದು ಅರಿವು ಮೂಡಿಸಲಾಗಿತ್ತು. ಮಹಾಶಕ್ತಿ ಕೇಂದ್ರ, ಶಕ್ತಿ ಕೆಂದ್ರ ಹಾಗೂ ಎಲ್ಲ ಬೂತ್ ಗಳಲ್ಲಿ ಸಭೆ ನಡೆಸಲಾಗಿದೆ. ಎಲ್ಲರ ಶ್ರಮದಿಂದ ಗುರಿ ತಲುಪಲು ಸಾಧ್ಯವಾಗಿದೆ ಎಂದರು.

ಕಾರ್ಯಕರ್ತರು ಸತತ ಎರಡು ತಿಂಗಳು ಹಬ್ಬ-ಹರಿದಿನಗಳನ್ನು ಲೆಕ್ಕಿಸದೆ ಸಕ್ರಿಯವಾಗಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರಿಂದ ಚುನಾವಣೆ ಮಾದರಿಯಲ್ಲಿ ಕೆಲಸವಾಗಿದೆ. ಎಲ್ಲರ ಪರಿಶ್ರಮದಿಂದಾಗಿ ಔರಾದ್ ಮಂಡಲ ರಾಜ್ಯದಲ್ಲಿ 5ನೇ ಮತ್ತು ಉಕದಲ್ಲಿ ಮೊದಲನೇ ಸ್ಥಾನ ಪಡೆದಿದ್ದು ಖುಷಿ ತಂದಿದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರು ನನ್ನನ್ನು ಭಾಲ್ಕಿ ಹಾಗೂ ಬೀದರ್ ಪ್ರಭಾರಿಯಾಗಿ ನೇಮಕ ಮಾಡಿದ್ದರು. ಅವರ ನಿರ್ದೇಶನದಂತೆ ಅಲ್ಲಿನ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಿದ ಬಳಿಕ ಸುಧಾರಣೆ ಕಾಣಿಸಿದೆ. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಅಗತ್ಯವಾಗಿತ್ತು ಎಂದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ರಾಜ್ಯ ಸಹ ಉಸ್ತುವಾರಿ ಡಾ.ಸುಧಾಕರರೆಡ್ಡಿ, ಎಂಎಲ್ಸಿ ಎನ್. ರವಿಕುಮಾರ್, ನಂದೀಶ್ ರೆಡ್ಡಿ ಇತರರಿದ್ದರು.