ಬೀದರ್: ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ನಿಂದ ಭಾನುವಾರ ರಾತ್ರಿ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಬೆಳಗು ಸಂಗೀತ ಸಂಜೆ-2024 ಕಾರ್ಯಕ್ರಮ ಸಂಗೀತಾಸಕ್ತರ ಮನ ತಣಿಸುವಲ್ಲಿ ಯಶಸ್ವಿಯಾಯಿತು. ಸತತ ಮೂರು ಗಂಟೆ ಕಲಾವಿದರು ಹರಿಸಿದ ಗಾನಲಹರಿಗೆ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ತಲೆದೂಗಿದರು.
ಕಲಾವಿದರಾದ ವೀರ ಸಮರ್ಥ, ಗುರುದೇವ, ಮಹೇಶ್ವರಿ ಪಾಂಚಾಳ, ಆಬೀದ್ ಅಲಿ ಖಾನ್, ಅರುಣ ಕಾರ್ನಾಡ್, ಪ್ರಿಯಂಕಾ ಗುರುದೇವ, ನಾಗಶೆಟ್ಟಿ ಲಕೋಟಿ, ಡಾ.ವಿ.ವಿ. ನಾಗರಾಜ್, ಮಲ್ಲಿಕಾಜರ್ುನ ಶೀಲವಂತ, ರವಿ ಮೂಲಗೆ, ಅನೀಲ ಮಜಗೆ ಹಾಡಿದ ಹಾಡುಗಳು ಸಭಿಕರನ್ನು ರಂಜಿಸಿದವು. ಸೊಲ್ಲಾಪುರದ ಜಬ್ಬಾರ್, ಧನಂಜಯ್ ನೇತೃತ್ವದ ನೇರ ವಾದ್ಯಮೇಳ ಝೇಂಕಾರ (ಲೈವ್ ಕನ್ಸಟ್೯) ಸಂಗೀತ ಸಂಜೆಯನ್ನು ಮತ್ತಷ್ಟು ರಂಗೇರಿಸಿತು. ಚಪ್ಪಾಳೆ ತಟ್ಟುವ ಮೂಲಕ ಕೇಳುಗರು ಗಾಯಕರಿಗೆ ಪ್ರೋತ್ಸಾಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಉದ್ಯಮಿ ಗುರುನಾಥ ಕೊಳ್ಳುರ್ ಮಾತನಾಡಿ, ಶರಣರು, ಸಂತರು ನಡೆದಾಡಿದ ಪುಣ್ಯಭೂಮಿ ಬೀದರ್. ಶ್ರೇಷ್ಠ ಸಂಸ್ಕೃತಿ ಪರಂಪರೆಯ ವಾರಸುದಾರರು ನಾವು. ಈ ನೆಲದಲ್ಲಿ ಜನಿಸಿದ್ದೇ ನಮ್ಮೆಲ್ಲರ ಸೌಭಾಗ್ಯ. ಸಂಗೀತದಲ್ಲಿ ತಲ್ಲೀನರಾದವರ ಮನಸ್ಸು, ರಕ್ತದ ಕಣ-ಕಣವೂ ಉತ್ತೇಜಿತವಾಗಿ ಪ್ರಫುಲ್ಲಗೊಳ್ಳುತ್ತದೆ. ಜಿಲ್ಲೆಯಲ್ಲಿ ಸಂಗೀತ ಚಟುವಟಿಕೆ ಇನ್ನೂ ಹೆಚ್ಚಾಗಿ ನಡೆಯಲಿ ಎಂದರು.
ಬೆಳಗು ಟ್ರೆಸ್ಟ್ ಅಧ್ಯಕ್ಷ ಅನೀಲಕುಮಾರ ದೇಶಮುಖ ಪ್ರಾಸ್ತಾವಿಕ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಉತ್ತೇಜನ ನೀಡಲು ಹಾಗೂ ಗಡಿ ಭಾಗದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆ ನಡೆಸುವ ಉದ್ದೇಶದಿಂದ 2017ರಲ್ಲಿ ಸಮಾನ ಮನಸ್ಕ ಸಂಗೀತ ಪ್ರೇಮಿಗಳಿಂದ ಬೆಳಗು ಟ್ರಸ್ಟ್ ಸ್ಥಾಪಿಸಲಾಗಿದೆ. ಈವರೆಗೆ 12ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಲಾಗಿದೆ. ಇನ್ಮುಂದೆ ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಬೆಳಗು ಸಂಗೀತ ಸಂಜೆ ವಾರ್ಷಿಕ ಸಮಾರಂಭ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಶ್ರೀ ಆನಂದರಾಜ ಮಾಣಿಕಪ್ರಭು ಉದ್ಘಾಟಿಸಿದರು. ತಾದಲಾಪುರ ದತ್ತಾನಂದ ಸಂಸ್ಥಾನದ ಪೀಠಾಧಿಪತಿ ಶ್ರೀ ವೈಕುಂಠದತ್ತ ಮಹಾರಾಜರಿಗೆ ವಿಶೇಷ ಸನ್ಮಾನ ನೀಡಿ ಅಭಿನಂದಿಸಲಾಯಿತು. ಟ್ರಸ್ಟಿಗಳಾದ ಸದಾನಂದ ಜೋಶಿ, ಹಾವಶೆಟ್ಟಿ ಪಾಟೀಲ್ ಇತರರಿದ್ದರು. ಖಜಾಂಚಿ ಡಾ.ಧೂಳಪ್ಪ ಪಾಟೀಲ್ ಸ್ವಾಗತಿಸಿದರು. ಮಂಜುಳಾ ಮೂಲಗೆ, ಮಹ್ಮದ್ ಗೌಸ್ ನಿರೂಪಣೆ ಮಾಡಿದರು.
ರಾಗದಿಂದ ರೋಗ ನಿವಾರಣೆ
ಸಂಗೀತದಲ್ಲಿ ಅತ್ಯದ್ಭುತ ಶಕ್ತಿಯಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಮನುಷ್ಯ ಶಾಂತಿ, ಸಮಾಧಾನ, ನೆಮ್ಮದಿ ಪಡೆಯಲು ಸಂಗೀತವೊಂದೇ ದಿವ್ಯ ಔಷಧವಾಗಿದೆ ಎಂದು ಸಂಗೀತ ಸಂಜೆ ಉದ್ಘಾಟಿಸಿದ ಶ್ರೀ ಆನಂದರಾಜ ಮಾಣಿಕಪ್ರಭು ಹೇಳಿದರು. ಒತ್ತಡದ ಬದುಕು ನಮಗೆ ಅನೇಕ ರೋಗಗಳನ್ನು ತರುತ್ತಿದೆ. ಒತ್ತಡ ನಿವಾರಿಸುವ ಶಕ್ತಿ ಸಂಗೀತಕ್ಕಿದೆ. ನಿತ್ಯ ಅರ್ಧ ತಾಸು ಸಂಗೀತಕ್ಕೆ ಸಮಯ ಕೊಟ್ಟವರು ಅನೇಕ ರೋಗಗಳಿಂದ ಪಾರಾಗಬಹುದು. ರಾಗದಿಂದ ರೋಗಗಳ ನಿವಾರಣೆ ಸಾಧ್ಯ ಎಂದು ಪ್ರತಿಪಾದಿಸಿದರು.