ಜಿಲ್ಲೆ

ಶಾಲೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ ಹಳೆಯ ವಿದ್ಯಾರ್ಥಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ತಾಲ್ಲೂಕಿನ ಯರನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಯೂ ಆದ ಮುಖಂಡ ಪೀರಪ್ಪ ಔರಾದೆ ಸ್ವಂತ ಖರ್ಚಿನಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಗಮನ ಸೆಳೆದಿದ್ದಾರೆ.

ಗ್ರಾಮದಲ್ಲಿ ಒಂದೇ ಆವರಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಟ್ಟಡಗಳು ಇವೆ. ಆವರಣದಲ್ಲಿ ಹೊಸ ಕಂಬ ಕೂಡಿಸಿ, ನಾಲ್ಕೂ ದಿಕ್ಕುಗಳ ದೃಶ್ಯಗಳು ಸೆರೆಯಾಗುವ ರೀತಿಯಲ್ಲಿ ಎರಡು ಸಿಸಿ

ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಶಾಲೆಯಲ್ಲಿ ಬಿಸಿಯೂಟ ಆಹಾರ ಧಾನ್ಯ ಕಳ್ಳತನ, ಕಿಟಕಿ, ಬಾಗಿಲು ಮುರಿದ ಘಟನೆಗಳು ನಡೆದಿದ್ದ ಬಗ್ಗೆ ಶಿಕ್ಷಕರು ಗಮನ ಸೆಳೆದಿದ್ದರು. ಹೀಗಾಗಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಶಾಲೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರೂ. 50 ಸಾವಿರ ವೆಚ್ಚದಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದೇನೆ ಎಂದು ಶನಿವಾರ ಸಿಸಿ ಟಿವಿ ಕ್ಯಾಮೆರಾಗಳಿಗೆ ಚಾಲನೆ ನೀಡಿದ ಪೀರಪ್ಪ ಔರಾದೆ ತಿಳಿಸಿದರು.

ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಮುಖಂಡ, ಶಾಲೆಯ ಹಳೆಯ ವಿದ್ಯಾರ್ಥಿ ಪೀರಪ್ಪ ಔರಾದೆ ಅವರ ಕಾರ್ಯ ಮಾದರಿಯಾಗಿದೆ ಎಂದು ಪ್ರೌಢಶಾಲೆ ಮುಖ್ಯಶಿಕ್ಷಕ ಪಾಂಡುರಂಗ ಬೆಲ್ದಾರ್ ಹೇಳಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲೆ ವತಿಯಿಂದ ಔರಾದೆ ಅವರನ್ನು ಶಾಲು ಹೊದಿಸಿ, ಸನ್ಮಾನಿಸಲಾಯಿತು.

ಪ್ರೌಢಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಸಲೀಂ ಪಾಶಾ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಾಬಶೆಟ್ಟಿ, ಮುಖಂಡರಾದ ವೈಜಿನಾಥ ಬಾಚೆಪಳ್ಳಿ, ರಮೇಶ, ರಾಜಶೇಖರ ಆಣದೂರೆ, ಅನಿಲ್, ರಂಜಿನಿ, ಹೇಮಲತಾ, ಸುರೇಖಾ ಮತ್ತಿತರರು ಇದ್ದರು.