ಜಿಲ್ಲೆ

ಸಂಶೋಧನೆಗೆ ತ್ರಿಭಾಷಾ ಪಾಂಡಿತ್ಯ ಅವಶ್ಯಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಆಯುರ್ವೇದದಲ್ಲಿ ಅತಿ ಹೆಚ್ಚು ಸಂಶೋಧನೆಗೆ ಸಂಸ್ಕøತ, ಇಂಗ್ಲಿಷ್ ಹಾಗೂ ಕನ್ನಡ ಭಾಷಾ ಪಾಂಡಿತ್ಯ ಅವಶ್ಯಕವಾಗಿದೆ ಎಂದು ನವದೆಹಲಿಯ ವೈದ್ಯಕೀಯ ಕಾಲೇಜುಗಳ ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷ ಡಾ. ರಘುರಾಂ ಭಟ್ ಹೇಳಿದರು.
ಇಲ್ಲಿಯ ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸೃಷ್ಟಿಯಲ್ಲಿ ಪ್ರತಿ ಸಸ್ಯ ಕೂಡ ಔಷಧೀಯ ಗುಣ ಹೊಂದಿದೆ. ಅದನ್ನು ಗುರುತಿಸಬೇಕು. ವ್ಯಕ್ತಿಯ ಸಕಲ ರೋಗಗಳಿಗೂ ಆಯುರ್ವೇದದಲ್ಲಿ ಚಿಕಿತ್ಸೆ ಇದೆ. ಹೀಗಾಗಿ ಈ ಕ್ಷೇತ್ರದಲ್ಲಿ ಸಂಕಲ್ಪ ಧಾರಿಯಾಗಿ, ಕಟಿ ಬದ್ಧನಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಕೇವಲ ಪುಸ್ತಕ ಜ್ಞಾನವಿದ್ದರೆ ಸಾಲದು. ವೈದ್ಯ ಚಿಕಿತ್ಸಾ ವಿಭಾಗದಲ್ಲೂ ಕ್ರಿಯಾಶೀಲನಾಗಿರಬೇಕು ಎಂದು ಹೇಳಿದರು.
ಪದವಿ ಪೂರ್ಣಗೊಂಡರೆ ಕಲಿಕೆ ಮುಗಿಯಿತು ಎಂದಲ್ಲ. ಪದವಿ ಮುಗಿಸಿ ವೈದ್ಯಕೀಯ ಸೇವೆ ಮಾಡುವ ಸಂದರ್ಭದಲ್ಲೇ ನಿಜವಾದ ಅಭ್ಯಾಸವಾಗುತ್ತದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಚಿದಂಬರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ವೃತ್ತಿ ಜೀವನದಲ್ಲಿ ಧನ ಸಂಪಾದನೆಯಷ್ಟೇ ವೈದ್ಯ ಪದವಿ ಪೂರೈಸಿದವರ ಆದ್ಯತೆಯಾಗಬಾರದು. ದಯೆ, ಧರ್ಮ, ಪುಣ್ಯ ಗಳಿಸುವ ಕೆಲಸ ಮಾಡಬೇಕು. ಪುಣ್ಯವೇ ಜೀವನದಲ್ಲಿ ಜತೆಗೆ ಬರುತ್ತದೆ ಎಂದು ಹೇಳಿದರು.
158 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಚಿದಂಬರ ಶಿಕ್ಷಣ ಸಂಸ್ಥೆಯ ಬಿ.ಜಿ. ಶೆಟಕಾರ್, ಉದಯಭಾನು ಹಲವಾಯಿ, ಮಡಿವಾಳಪ್ಪ ಗಂಗಶೆಟ್ಟಿ, ಶರಣಪ್ಪ ತಿರ್ಲಾಪುರೆ, ಸುಭಾಷ್ ಉಪ್ಪೆ, ಶಿವಶರಣಪ್ಪ ಸಾವಳಗಿ, ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಡಾ. ವಿಜಯಕುಮಾರ ಬಿರಾದಾರ, ಡಾ. ಶ್ರೀದೇವಿ ಸ್ವಾಮಿ, ಡಾ. ಪ್ರವೀಣ ಸಿಂಪಿ, ಡಾ. ಬಂಡೆಪ್ಪ, ಡಾ. ಅನಿಲ್ ಬಚ್ಚಾ, ಡಾ. ಧೂಳಪ್ಪ, ಡಾ. ಸಂಜುಕುಮಾರ ಜೋತೆಪ್ಪ, ಡಾ. ಅಶೋಕ, ಡಾ. ರವಿಚಂದ್ರ, ಅಮರನಾಥ ಕಣಜಿ ಇದ್ದರು.
ಪ್ರಾಚಾರ್ಯ ಡಾ. ಚಂದ್ರಕಾಂತ ಹಳ್ಳಿ ಸ್ವಾಗತಿಸಿದರು. ಡಾ. ಪ್ರೀತಿ ಹಾಗೂ ಡಾ. ಶೈಲಜಾ ನಿರೂಪಿಸಿದರು. ಡಾ. ಚನ್ನಬಸವಣ್ಣ ವಂದಿಸಿದರು.