ಬೀದರ್: ನಗರದಲ್ಲಿ ಅಕ್ಟೋಬರ್ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಬಸವನಗರ ವಿಕಾಸ ಸಮಿತಿ, ಕಿತ್ತೂರು ಚೆನ್ನಮ್ಮ ಬಡಾವಣೆ, ವಿದ್ಯಾನಗರ ವಿಕಾಸ ಸಮಿತಿ ಹಾಗೂ ಹಾರೂರಗೇರಿ ಬಸವ ಸಮಿತಿ ವತಿಯಿಂದ ಭವ್ಯ ಮೆರವಣಿಗೆ, ವೇದಿಕೆ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನದೊಂದಿಗೆ ಜಯಂತಿ ಆಚರಿಸಲಾಗುವುದು ಎಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸಮಿತಿಯ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಹಾಗೂ ಬಸವನಗರ ಮಹಿಳಾ ಮಂಡಳದ ಅಧ್ಯಕ್ಷೆ ರತ್ನಾ ಪಾಟೀಲ ತಿಳಿಸಿದ್ದಾರೆ.
ಬೆಳಿಗ್ಗೆ 8.30ಕ್ಕೆ ಬಸವನಗರದ ಬಸವೇಶ್ವರ ಮಂದಿರದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವರೆಗೆ ಅಲಂಕೃತ ವಾಹನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್ ಹಾಗೂ ಬಿ.ವಿ. ಭೂಮರಡ್ಡಿ ಕಾಲೇಜಿನ ಪ್ರಾಚಾರ್ಯ ಡಾ. ವಿಠ್ಠಲ ರೆಡ್ಡಿ ಜಂಟಿಯಾಗಿ ಮೆರವಣಿಗೆಗೆ ಚಾಲನೆ ನೀಡುವರು ಎಂದು ಹೇಳಿದ್ದಾರೆ.
ಬೆಳಿಗ್ಗೆ 9.30ಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆಯುವ ಜಯಂತಿ ಆಚರಣೆ ಸಮಾರಂಭವನ್ನು ಸಾಹಿತಿ ರಜಿಯಾ ಬಳಬಟ್ಟಿ ಉದ್ಘಾಟಿಸುವರು.
ನಗರಸಭೆ ಸದಸ್ಯರಾದ ಪ್ರೀತಿ ರಾಜೇಶ್, ಸಂತೋಷಕುಮಾರಿ ಅರುಣಕುಮಾರ, ದಿಗಂಬರ ಮಡಿವಾಳ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಹಾರೂರಗೇರಿ ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ವಿದ್ಯಾನಗರದ ಶರಣ ಜೀವಿ ಬಸವಣಪ್ಪ ನೇಳಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ರತ್ನಾ ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರಜಿಯಾ ಬಳಬಟ್ಟಿ, ರಾಣಿ ಸತ್ಯಮೂರ್ತಿ ಹಾಗೂ ಬಸವಭಾಗ್ಯ ವೈಜಿನಾಥ ಸಜ್ಜನಶೆಟ್ಟಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.