ಬೀದರ್: ದಿ ಗಾಂಧಿಗಂಜ್ ಕೋ-ಆಪರೇಟಿವ್ ಸಹಕಾರ ಬ್ಯಾಂಕ್ಗೆ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅ.27ರಂದು ನಗರದ ಸಿಂದೋಲ್ ಕಲ್ಯಾಣ ಮಂಟಪದಲ್ಲಿ ಬ್ಯಾಂಕ್‌ನ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಹೇಳಿದರು.
ಕಾರ್ಯಕ್ರಮವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಯೋಜನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅ.20ರಿಂದ 26ರವರೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದ ವಿವಿಧೆಡೆ ಆಯೋಜಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
27ರಂದು ಬೆಳಗ್ಗೆ 11ಕ್ಕೆ ಕಾರ್ಯಕ್ರಮವನ್ನು ಕೇಂದ್ರದ ಸಹಕಾರ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಉದ್ಘಾಟಿಸುವರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ವಿಶೇಷ ಠೇವಣಿ ಯೋಜನೆಗೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರಕುಮಾರ ಖಂಡ್ರೆ, ಶಕುಂತಲಾ ಕೆ.ಬೆಲ್ದಾಳೆ ಇತರರು ಪಾಲ್ಗೊಳ್ಳುವರು ಎಂದರು.
1974ರಲ್ಲಿ ಎಪಿಎಂಸಿ ಮಾರುಕಟ್ಟೆ ವ್ಯಾಪಾರಿಗಳು ಸೇರಿ ಮಹಾಂತಪ್ಪ ಮಡಕಿ ನೇತೃತ್ವದಲ್ಲಿ 189 ಸದಸ್ಯರಿಂದ 1.82 ಲಕ್ಷ ರೂ. ಷೇರು ಬಂಡವಾಳ ಸಂಗ್ರಹಿಸಿ ಗಾಂಧಿಗಂಜ್ ಬ್ಯಾಂಕ್ ಆರಂಭಿಸಲಾಯಿತು. ಪ್ರಸ್ತುತ 5.19 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. ಶಿವನಗರ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್, ಔರಾದ್ ಗಳಲ್ಲಿ ಶಾಖೆಗಳನ್ನು ಹೊಂದಿದೆ ಎಂದು ಹೇಳಿದರು.
ಬ್ಯಾಂಕ್ ಉಪಾಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ, ನಿರ್ದೇಶಕರಾದ ಡಿ.ವಿ. ಸಿಂದೋಲ್, ಅಶೋಕ ಲಾಚೋರಿಯಾ, ಕಾಶೀನಾಥ ಶೆಟಕಾರ, ಜೈಕುಮಾರ ಕಾಂಗೆ, ಸುನೀಲ ಬಿರಾದಾರ್ ಗುನ್ನಳ್ಳಿ, ಅಂತೇಶ್ವರ ಶೆಟಕಾರ್, ಕೆ.ಕೆ. ಅಟ್ಟಲ್, ಭರತ ಶೆಟಕಾರ್, ಶಿವನಾಥ ಪಾಟೀಲ್, ಅಮರನಾಥ ಫುಲೇಕರ್, ಮಲ್ಲಿಕಾರ್ಜುನ ಕಾರಬಾರಿ, ಶಾಂತಾ ಖಂಡ್ರೆ, ಜ್ಯೋತಿ ಗೌರಶೆಟ್ಟಿ, ಸಿಇಒ ಮಹಾನಂದ ಪಾಟೀಲ್ ಇದ್ದರು.