ಔರಾದ: ಬೆಂಬಲ ಬೆಲೆ ಯೋಜನೆಯಡಿ ರೈತರ ಬೆಳೆಗಳನ್ನು ಖರೀದಿಸಲು ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಸಿರುವ ಖರೀದಿ ಕೇಂದ್ರಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಎಲ್ಲ ಖರೀದಿ ಕೇಂದ್ರಗಳನ್ನು ಶೀಘ್ರ ಆರಂಭಿಸಬೇಕೆಂದು ಶಾಸಕ ಪ್ರಭು ಚವ್ಹಾಣ ಆಗ್ರಹಿಸಿದ್ದಾರೆ.
ಶಾಸಕರು ಸಹಕಾರ ಮಾರಾಟ ಮಂಡಳಿಯ ಬೀದರ ಶಾಖಾ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಔರಾದ ಕ್ಷೇತ್ರದಲ್ಲಿ ಸೋಯಾ ಕಟಾವು ಮುಗಿಯುವ ಹಂತಕ್ಕೆ ಬಂದಿದೆ. ಆದರೂ ಇನ್ನೂ ಖರೀದಿ ಕೇಂದ್ರಗಳನ್ನು ಆರಂಭಿಸದಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ಇನ್ನಾದರೂ ಖರೀದಿ ಕೇಂದ್ರಗಳನ್ನು ತುರ್ತಾಗಿ ಆರಂಭಿಸುವಂತೆ ಸೂಚಿಸಿದರು.
ಔರಾದ ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಒಟ್ಟು 20 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವವಾಗಿ ಎಲ್ಲಿಯೂ ಸೋಯಾ ಬಿನ್ ಖರೀದಿ ಸಮರ್ಪಕವಾಗಿ ನಡೆಯುತ್ತಿಲ್ಲ. ಖಾಸಗಿ ಮಾರುಕಟ್ಟೆಯಲ್ಲಿ ರೈತರ ಬೆಳೆಗಳನ್ನು ಕಡಿಮೆ ಬೆಲೆಗೆ ಸೋಯಾ ಖರೀದಿ ಮಾಡುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ತಮ್ಮ ಬೆಳೆಗಳನ್ನು ಮಹಾರಾಷ್ಟ್ರ ರಾಜ್ಯದ ಉದಗೀರ, ಲಾತೂರ್‌ನಲ್ಲಿ ಮಾರಾಟ ಮಾಡಲು ಆರಂಭಿಸಿದ್ದು, ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂದಿದ್ದಾರೆ.
ಔರಾದನಲ್ಲಿ ಬಹುತೇಕ ರೈತರು ಮಳೆಯಾಶ್ರೀತ ಬೇಸಾಯವನ್ನು ಅವಲಂಬಿಸಿದ್ದು, ಸರಿಯಾಗಿ ಮಳೆಯಾದರೆ ಮಾತ್ರ ಉತ್ತಮ ಬೆಳೆಯಾಗುತ್ತದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಬೆಳೆದಿರುವ ರೈತರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಖರೀದಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಸೋಯಾ ಖರೀದಿಸದ ಕಾರಣ ನಿರಾಶರಾಗಿದ್ದಾರೆ. ರೈತರಿಗೆ ಉತ್ತಮ ಲಾಭ ದೊರೆತು ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ರೈತರ ಬೆಳೆಗಳನ್ನು ಖರೀದಿಗೆ ವ್ಯವಸ್ಥೆ ಕಲ್ಪಿಸಿದೆ. ಇದರ ಸದುಪಯೋಗ ರೈತರಿಗೆ ಸಿಗುವಂತಾಗಲು ಖರೀದಿ ಕೇಂದ್ರಗಳು ಸರಿಯಾಗಿ ಕೆಲಸ ಮಾಡಬೇಕೆಂದು ಶಾಸಕರು ತಿಳಿಸಿದ್ದಾರೆ.