ಚಿಟಗುಪ್ಪ: ಮನ್ನಾಎಖೇಳ್ಳಿ ಹತ್ತಿರದ ಶ್ರೀ ಬಾಲಮ್ಮ ದೇವಿ ಮಂದಿರದಲ್ಲಿ ನವರಾತ್ರಿ ಉತ್ಸವ ಅದ್ದೂರಿಯಿಂದ ನಡೆಯುತ್ತಿದ್ದು, ಸ್ಥಳೀಯರಲ್ಲದೆ ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರದಿಂದ ಅಸಂಖ್ಯ ಭಕ್ತರು ಆಗಮಿಸುತ್ತಿದ್ದಾರೆ.
ಮಂಗಳವಾರ ಬೇಮಳಖೇಡ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ನೇತೃತ್ವದಲ್ಲಿ ಮಹಿಳೆಯರಿಂದ ಕುಂಕುಮಾರ್ಚನೆ ಜರುಗಿತು. ಬಾಲಮ್ಮ ದೇವಿ 24ನೇ ಜಾತ್ರಾ ಮಹೋತ್ಸವ ನಿಮಿತ್ತ ಅ.11ರವರೆಗೆ ನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ ಪೂಜಾಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗುತ್ತಿವೆ. ಪ್ರತಿನಿತ್ಯ ರಾತ್ರಿ 8ಕ್ಕೆ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಶ್ರೀದೇವಿ ಪುರಾಣ ಪ್ರವಚನ ನೀಡುತ್ತಿದ್ದಾರೆ.
ಶ್ರೀ ಶಂಕರಲಿಂಗ ಮಹಾರಾಜ ಸೊಂತ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನ ಕಮಿಟಿ ಅಧ್ಯಕ್ಷ ಹಣಮಂತಪ್ಪ ಮರಕುಂದಾ, ಉಪಾಧ್ಯಕ್ಷ ಆನಂದ ಮರಕುಂದಾ, ಕಾರ್ಯದರ್ಶಿ ಈಶ್ವರ ಬಸರಡ್ಡಿ, ಸ್ವಾಗತ ಸಮಿತಿ ಅಧ್ಯಕ್ಷ ಶಂಕರರಾವ ಜೋತಗೊಂಡ, ಪ್ರಮುಖರಾದ ಐ.ಬಿ. ಸಂಗಾರಡ್ಡಿ, ಸಂತೋಷ ಕಮಲಪುರ, ಸಂಜೀವಕುಮಾರ ನಂದಗಾಂವ, ರೇವಣಸಿದ್ದಯ್ಯ ಸ್ವಾಮಿ, ಝರೆಪ್ಪ ಹುಣಚಗೇರಾ, ರಾಜಕುಮಾರ ಬಿರಾದಾರ್, ಸುನೀತಾ ರಾಸೂರೆ ಇತರರಿದ್ದರು. ಮಲ್ಲಯ್ಯ ಚಿಕ್ಕಮಠ, ನವಲಿಂಗ ಪಾಟೀಲ್ ಸಂಗೀತ ಪ್ರಸ್ತುತಪಡಿಸಿದರು. ಪ್ರಶಾಂತ ಜವಳಗಿ ಸ್ವಾಗತಿಸಿದರು. ಸಂಗ್ರಾಮ ಚಾಮಾ ನಿರೂಪಣೆ ಮಾಡಿದರು.
ಭಕ್ತಿಯಿಂದ ಪೂಜಿಸಿದರೆ ಕಷ್ಟಗಳು ದೂರ
ಜೀವನದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಭಕ್ತಿಯಿಂದ ಕುಂಕುಮಾರ್ಚನೆ ನೆರವೇರಿಸಿದರೆ ಕಷ್ಟಗಳು ದೂರವಾಗಿ ಕುಟುಂಬದಲ್ಲಿ ಸುಖ, ಶಾಂತಿ ನೆಲೆಸುತ್ತದೆ ಎಂದು ಬೇಮಳಖೇಡದ ಶ್ರೀ ಡಾ.ರಾಜಶೇಖರ ಸ್ವಾಮೀಜಿ ನುಡಿದರು. ಕುಂಕುಮಾರ್ಚನೆ ನಂತರ ಆಶೀರ್ವಚನ ನೀಡಿದ ಅವರು, ಶಿವನಿಗೆ ಭಸ್ಮ, ಬಿಲ್ವಪತ್ರೆ ಪ್ರಿಯವಾಗಿರುವಂತೆ ದುರ್ಗಾ ಮಾತೆಗೆ ಕುಂಕುಮಾರ್ಚನೆ, ಪುಷ್ಪಾರ್ಚನೆಗಳೆಂದರೆ ಎಲ್ಲಿಲ್ಲದ ಪ್ರೇಮ. ಹೀಗಾಗಿ ನವರಾತ್ರಿ ವೇಳೆ ಸಹಸ್ರನಾಮ ಪಠಣದೊಂದಿಗೆ ಕುಂಕುಮಾರ್ಚನೆ ಮಾಡಿದರೆ ಸಂಸಾರದಲ್ಲಿನ ಬಡತನ, ಕಷ್ಟ-ಕಾರ್ಪಣ್ಯಗಳು ದೂರವಾಗುತ್ತವೆ ಎಂದರು. ಜಗತ್ತಿನ ಚಲನೆಗೆ ದೇವಿಯೇ ಶಕ್ತಿ ವಾಹಕಿ. ಮಗುವಿಗೆ ತಾಯಿ ಸಂಪೂರ್ಣವಾಗಿರುವಂತೆ ದೇವಿ ಜೀವ ಜಗತ್ತಿನ ಮಾತೃ ಸ್ವರೂಪಿಣಿ. ವಿರಾಟ ಸ್ವರೂಪದಿಂದ ಶಕ್ತಿ ಬ್ರಹ್ಮಾಂಡದ ಪಾಲಕಿ. ಜೀವ ಜಗತ್ತಿಗೆ ಕಂಟಕರಾಗಿದ್ದ ದುಷ್ಟ ದೈತ್ಯರನ್ನು ಸಂಹರಿಸಿ ಲೋಕಕಲ್ಯಾಣ ಮಾಡಿದ ಲೋಕ ಮಾತೆಯ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಪ್ರವಚನ ಮಂಗಲೋತ್ಸವ ನಾಳೆ
ನವರಾತ್ರಿ ನಿಮಿತ್ತ ಬಾಲಮ್ಮ ದೇವಸ್ಥಾನದಲ್ಲಿ ಪ್ರವಚನ ಮಂಗಲೋತ್ಸವ ಗುರುವಾರ ರಾತ್ರಿ 8ಕ್ಕೆ ನಡೆಯಲಿದೆ. ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಶ್ರೀ ವೀರೇಶ್ವರ ಶಿವಾಚಾರ್ಯ, ಮಾತೆ ಮೈತ್ರಾದೇವಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ್ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ ಪಾಲ್ಗೊಳ್ಳುವರು. ಅ.11ರಂದು ಬೆಳಗ್ಗೆ 8ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನ ಅಧ್ಯಕ್ಷ ಹಣಮಂತಪ್ಪ ಮರಕುಂದಾ ತಿಳಿಸಿದ್ದಾರೆ.