ಬೀದರ್: ಹುಮನಾಬಾದ್ ಪಟ್ಟಣದಲ್ಲಿ ಅ.2ರಂದು ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದರು.
ಕುಡಿಯಲು (ಮದ್ಯ) ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಹುಮನಾಬಾದ್ನ ಜೇರಪೇಟ ಬಡಾವಣೆ ನಿವಾಸಿ, ಪರಿಚಿತನಾಗಿದ್ದ ಧಮ್ಮನಸೂರದ ಅರ್ಜುನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹತ್ಯೆಯಾದವನಿಂದ 300 ರೂ. ನಗದು ಮತ್ತು ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪಿಎಸ್ಐ ಸುರೇಶಕುಮಾರ ಮತ್ತು ಸಿಬ್ಬಂದಿ ತಂಡ ಪತ್ತೆ ಹಚ್ಚಿದ್ದಲ್ಲದೆ ಆತನ ಮನೆಯಲ್ಲಿದ್ದ ಹಣ ಮತ್ತು ಮೊಬೈಲ್ ಜತೆಗೆ ಅನಧಿಕೃತವಾಗಿ ಇಟ್ಟಿಕೊಂಡಿದ್ದ ಐದು ತಲವಾರ್ಗಳನ್ನು ವಶಕ್ಕೆ ಪಡೆದಿದೆ ಎಂದರು.
ಗಾಂಜಾ ಬೆಳೆಗಾರನ ಬಂಧನ: ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಮಂಠಾಳ ಪಿಎಸ್ಐ ಸುವರ್ಣ ಮಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ ಮಹಾರಾಷ್ಟದ ಹಿಪ್ಪರಗಾರಾವ್ ವಾಡಿ ಗ್ರಾಮದ ಬಸವಂತ ಅವರನ್ನು ಬಂಧಿಸಿದೆ ಎಂದು ಎಸ್ಪಿ ಗುಂಟಿ ತಿಳಿಸಿದರು.
ಮಾರಾಟದ ಉದ್ದೇಶದಿಂದ ಆರೋಪಿಯು ಉಜಳಂಬ ಶಿವಾರದ ಸುಮಾರು 3.7 ಎಕರೆ ಜಮೀನಿನಲ್ಲಿ ತೊಗರಿ ಬೆಳೆ ನಡುವೆ ಅಂದಾಜು 2 ಕೋಟಿ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಪ್ರಕರಣ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡಕ್ಕೆ 10 ಸಾವಿರ ರೂ. ಬಹುಮಾನ ನೀಡಲಾಗಿದೆ ಎಂದು ಹೇಳಿದರು.
ದಸರಾ ಹಬ್ಬದ ಪ್ರಯುಕ್ತ ಬೀದರ್ ನಗರದಲ್ಲಿ ಮಾತಾ ಭವಾನಿ ಮೆರವಣಿಗೆಯನ್ನು ಸೌಹಾರ್ದದಿಂದ ನಡೆಸುವಂತೆ ಸಭೆ ನಡೆಸಿ ಮುಖಂಡರಿಗೆ ಸೂಚಿಸಲಾಗಿದೆ. ಸಂಭ್ರಮಾಚರಣೆ ವೇಳೆ ಪೊಲೀಸ್ ಭದ್ರತೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಜೆ.ಎಸ್. ನ್ಯಾಮೆಗೌಡ ಇತರರಿದ್ದರು.