ಜಿಲ್ಲೆ

ಜೀವನ ನಿರ್ವಹಣೆಗೆ ಹೈನು ಮುಖ್ಯ ಕಸುಬು

ರೇವಣಸಿದ್ದಪ್ಪ ಪಾಟೀಲ್

ಬೀದರ್: ಗ್ರಾಮೀಣ ಭಾಗದ ಬಡವರಿಗೆ ದೈನಂದಿನ ಜೀವನ ನಿರ್ವಹಣೆಗೆ ಹೈನುಗಾರಿಕೆ ಮುಖ್ಯ ಕುಸುಬಾಗಿದ್ದು, ಎಂಥ ಸಂದರ್ಭದಲ್ಲಿಯೂ ಕೈಬಿಡಲ್ಲ ಎಂದು ಪಶು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಬಸವರಾಜ ಪಿ.ಭತಮುರ್ಗೆ ಹೇಳಿದರು.
ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹೈನು ರಾಸುಗಳ ಉತ್ತಮ ಆರೋಗ್ಯ ಮತ್ತು ಉತ್ಪಾದನೆಗಾಗಿ ವೈಜ್ಞಾನಿಕ ಆಹಾರ ಪದ್ಧತಿ ಕುರಿತ ತರಬೇತಿ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಯು ಸ್ಥಿರವಾದ ಮಾರುಕಟ್ಟೆ, ನಿಯಮಿತ ಆದಾಯ ಹಾಗೂ ಉದ್ಯೋಗ ಅವಕಾಶ ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತದೆ. ಜನರ ಜೀವನಮಟ್ಟ ಸುಧಾರಿಸುವುದಲ್ಲದೆ, ಉದ್ಯೋಗ ಆರಿಸಿ ವಲಸೆ ಹೋಗುವುದನ್ನು ತಡೆಯಲು ಸಹಕಾರಿಯಾಗಿದೆ ಎಂದರು.
ವಿವಿ ವಿಸ್ತರಣಾ ನಿರ್ದೇಶಕ ಡಾ.ಬಸವರಾಜ ಅವಟಿ ಮಾತನಾಡಿ, ವಿವಿ ರಾಜ್ಯಾದ್ಯಂತ ತನ್ನ ಸಂಸ್ಥೆಗಳ ಮುಖಾಂತರ ಅಭಿವೃದ್ದಿಪಡಿಸಿದ ವಿವಿಧ ರೀತಿಯ ತಂತ್ರಜ್ಞಾನಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆ ಕಾಲೇಜಿನ ಡೀನ್ ಡಾ.ಎಸ್.ವಿ. ಪಾಟೀಲ್ ಮಾತನಾಡಿ, ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಪದ್ಧತಿ ಮೂಲಕ ಸಮಗ್ರ ಕೃಷಿ ಮತ್ತು ಸುಸ್ಥಿರ ಹೈನುಗಾರಿಕೆಯಿಂದ ರೈತರು ನೆಮ್ಮದಿ ಜೀವನ ನಡೆಸಬಹುದು ಎಂದು ಹೇಳಿದರು.
ಪಶುವೈದ್ಯಕೀಯ ಕಾಲೇಜಿನ ಡೀನ್ ಡಾ.ಎಂ.ಕೆ. ತಾಂದಳೆ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಸಂಯೋಜಕ ಡಾ.ಗಿರಿಧರ್ ಕೆ.ಎಸ್., ಸಹ ಸಂಯೋಜಕರಾದ ಡಾ.ರವೀಂದ್ರ ಬಿ.ಡಿ., ಡಾ.ಪ್ರಕಾಶ ರಾಥೋಡ್, ಡಾ.ಕೊಟ್ರೇಶ ಪ್ರಸಾದ್ ಇತರರಿದ್ದರು.