ಬೀದರ್: ವಿಜಯ ದಶಮಿ ಪ್ರಯುಕ್ತ ಭಾಲ್ಕಿ ತಾಲ್ಲೂಕಿನ ಖಾನಾಪುರದಲ್ಲಿ ಅಕ್ಟೋಬರ್ 12 ರಂದು ಮಲ್ಲಣ್ಣ ದೇವರ ವೈಭವದ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಜರುಗಲಿದೆ.
ರಾತ್ರಿ 11.15ಕ್ಕೆ ದೇವಸ್ಥಾನದಿಂದ ಆರಂಭವಾಗುವ ಪಲ್ಲಕ್ಕಿ ಮೆರವಣಿಗೆಯು ಘೃತಮಾರಿ ತುಪ್ಪದ ಮಾಳವ್ವ (ಗುರತ್ ಮಲ್ಲಮ್ಮ) ದೇವಸ್ಥಾನ, ಮುಖ್ಯ ಬೀದಿಗಳ ಮೂಲಕ ಹಾಯ್ದು ಗ್ರಾಮದ ಹನುಮಾನ ಮಂದಿರ ತಲುಪಿ ಮುಕ್ತಾಯಗೊಳ್ಳಲಿದೆ.
ರಾತ್ರಿಯಿಡೀ ಡೊಳ್ಳು ಕುಣಿತ, ವಗೈಯ್ಯ ಕುಣಿತ, ಕಾಟಿ ಕುಣಿತ ಮೊದಲಾದವು ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಲಿವೆ. ಮಂದಿರದಲ್ಲಿ ವಿಶೇಷ ಪೂಜೆ, ಅಭಿಷೇಕ, ಪ್ರಸಾದ ವಿತರಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.
ರಥೋತ್ಸವವು ಅಕ್ಟೋಬರ್ 13 ರಂದು ಬೆಳಿಗ್ಗೆ 6.30ಕ್ಕೆ ಮಂದಿರದಲ್ಲಿ ಮಹಾಮಂಗಳಾರತಿಯೊಂದಿಗೆ ಸಮಾರೋಪಗೊಳ್ಳಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಪ್ರಕಾಶ ಮೇತ್ರೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ.