ಬೀದರ್: ನಗರಸಭೆಯ ಭರವಸೆ ಹಿನ್ನೆಲೆಯಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಅಕ್ಟೋಬರ್ 8 ರಂದು ನಡೆಸಲು ಉದ್ದೇಶಿಸಿದ್ದ ನಗರಸಭೆ ಮುತ್ತಿಗೆಯನ್ನು ಮುಂದೂಡಿದೆ.
ನಗರದಲ್ಲಿ ಅಂಗಡಿ-ಮುಂಗಟ್ಟು, ವಾಣಿಜ್ಯ ಮಳಿಗೆ ಸೇರಿ ಎಲ್ಲ ರೀತಿಯ ನಾಮಫಲಕಗಳ ಮೇಲೆ ಶೇ 60 ರಷ್ಟು ಭಾಗದಲ್ಲಿ ಕನ್ನಡ ಬಳಕೆಗೆ 15 ದಿನಗಳ ಒಳಗೆ ಕ್ರಮ ಕೈಗೊಳ್ಳುವುದಾಗಿ ನಗರಸಭೆ ಆಯುಕ್ತ ಶಿವರಾಜ ರಾಠೋಡ್ ಲಿಖಿತ ಭರವಸೆ ನೀಡಿದ್ದಾರೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದ್ದಾರೆ.
ನಾಮಫಲಕದಲ್ಲಿ ಕನ್ನಡ ಬಳಸದವರಿಗೆ ಎರಡು ನೋಟಿಸ್ ಕೊಡಲಾಗಿದೆ. ಕನ್ನಡ ಬಳಸದ ಅನ್ಯ ಭಾಷೆಯ ಅನೇಕ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ. ಅಂಗಡಿಗಳ ಮೇಲೆ ಸರ್ಕಾರದ ಆದೇಶದಂತೆ ಮೇಲುಗಡೆ ಶೇ 60 ರಷ್ಟು ಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸುವ ದಿಸೆಯಲ್ಲಿ ನಗರಸಭೆ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಹೀಗಾಗಿ ಮುತ್ತಿಗೆ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.