ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಈಗಾಗಲೇ ಪ್ರಕಟಿಸಲಾದ ವೇಳಾಪಟ್ಟಿಯಂತೆಯೇ 2024-29ರ ಅವಧಿಯ ಚುನಾವಣೆ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ತಿಳಿಸಿದ್ದಾರೆ.
ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಕೃಷ್ಣಯ್ಯ ಅವರು ಹೂಡಿದ್ದ ದಾವೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಿವಿಲ್ ಕೋರ್ಟ್ ನೀಡಿದ್ದ ತಡಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದ್ದು, ಜಿಲ್ಲಾ, ತಾಲ್ಲೂಕು ಘಟಕ, ಯೋಜನಾ ಶಾಖೆಗಳಿಗೆ ಯಥಾವತ್ತಾಗಿ ಚುನಾವಣೆ ಜರುಗಲಿದೆ ಎಂದು ಹೇಳಿದ್ದಾರೆ.
ತಾಲ್ಲೂಕು ಘಟಕದ ನಿರ್ದೇಶಕ ಸ್ಥಾನಗಳಿಗೆ ಅಕ್ಟೋಬರ್ 9 ರಿಂದ 28 ರ ವರೆಗೆ, ತಾಲ್ಲೂಕು ಘಟಕಗಳ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯ ಸ್ಥಾನಗಳಿಗೆ ಅಕ್ಟೋಬರ್ 30 ರಿಂದ ನವೆಂಬರ್ 16, ಜಿಲ್ಲಾ ಘಟಕದ ನಿರ್ದೇಶಕ ಸ್ಥಾನಗಳಿಗೆ ಅ.28 ರಿಂದ ನವೆಂಬರ್ 16, ಜಿಲ್ಲಾ ಘಟಕದ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್ ಸದಸ್ಯ ಸ್ಥಾನಗಳಿಗೆ ನವೆಂಬರ್ 19 ರಿಂದ ಡಿಸೆಂಬರ್ 4 ರ ವರೆಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಬೀದರ್ ಜಿಲ್ಲೆಯಲ್ಲಿ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ. ಚುನಾವಣೆ ನಿಯಮಾನುಸಾರ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಜರುಗಲಿದೆ. ಹೀಗಾಗಿ ಮತದಾರರು ಚುನಾವಣೆ ಕುರಿತಂತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಹೇಳಿದ್ದಾರೆ.