ಜಿಲ್ಲೆ

ಸ್ತ್ರೀಯರಿಗೆ ಸಮಾನತೆ ನೀಡಿದ್ದು ಶರಣರು

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಬಸವಾದಿ ಶರಣರು 12ನೆಯ ಶತಮಾನದಲ್ಲೇ ಸ್ತ್ರೀಯರಿಗೆ ಸಮಾನತೆ ನೀಡುವ ಮೂಲಕ ಆತ್ಮಗೌರವ ಹೆಚ್ಚಿಸಿದರು. ಜಗತ್ತಿನಲ್ಲಿ ಪ್ರಥಮವಾಗಿ ಮಹಿಳೆಯರಿಗೆ ಆಯ್ಕೆ ಸ್ವಾತಂತ್ರ್ಯ ನೀಡುವುದರೊಂದಿಗೆ ಸ್ವಾಭಿಮಾನಿಗಳನ್ನಾಗಿಸಿದರು ಎಂದು ಸ್ತ್ರೀರೋಗ ತಜ್ಞೆ ಡಾ.ಶೈಲಜಾ ಅನೀಲ ತಳವಾಡೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಲ್ಲಿ ಆಯೋಜಿಸಿದ್ದ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶರಣರು ಮಹಿಳೆಯರಿಗೆ ಸಮಾನತೆ ಕಲ್ಪಿಸಿ ಸಮಾಜದಲ್ಲಿನ ಮೇಲು-ಕೀಳು ಹೊಡೆದೋಡಿಸಲು ಪ್ರಯತ್ನಿಸಿದ್ದರು ಎಂದರು.
ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿದ್ದ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿಸಿ ಮಾನವಕುಲ ಒಂದೇ ಎಂಬುದನ್ನು ಎತ್ತಿ ಹಿಡಿದಿದ್ದರು. ಮೇಲ್ವರ್ಗದವರು ಅಂತರ್ಜಾತಿ ವಿವಾಹ ತಡೆಯಲು ಯತ್ನಿಸಿದ್ದೇ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು. ಮಹಾನವಮಿ ಸಂದರ್ಭದಲ್ಲಿ ಶರಣರ ಹತ್ಯೆ ನಡೆಯಿತು. ಆದರೂ ಬಸವಣ್ಣ ಮತ್ತು ಶರಣರು ತಮ್ಮ ತತ್ವ ಸಿದ್ಧಾಂತ ಎತ್ತಿಹಿಡಿದು ಮರಣವೇ ಮಹಾನವಮಿ ಎಂದು ಸಾರಿದರು. ಶರಣರು ಮರಣಕ್ಕಾಗಿ ಅಂಜಲಿಲ್ಲ, ಬದಲಾಗಿ ತತ್ವಕ್ಕಾಗಿ ಬದುಕಿದರು. ಅಂಥ ಶರಣರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣವರು ಮೂಢಾಚಾರ ಹಾಗೂ ಕಂದಾಚಾರ ಗಮನಿಸಿ ಅದರಿಂದ ಜನರನ್ನು ಹೊರತರಲು ಯತ್ನಿಸಿದರು ಎಂದರು.
ಮಹಿಳೆ ಬೆಳಕಿನ ಸಂಕೇತ. ಸಮಾಜದ ಬೆಳವಣಿಗೆಯಲ್ಲಿ ತಾಯಂದಿರ ಕೊಡುಗೆ ದೊಡ್ಡದಿದೆ. ಈ ಕಾರಣಕ್ಕಾಗಿಯೇ ಬಸವಣ್ಣ ಸೇರಿ ಎಲ್ಲ ಶರಣರು ಮಹಿಳೆಯರಲ್ಲಿ ಸಾಕ್ಷತ್ ದೇವರನ್ನು ಕಂಡಿದ್ದಾರೆ. ಎಲ್ಲ ರಂಗದಲ್ಲಿ ಮಹಿಳೆಯರ ಸಾಧನೆ ಶ್ರೇಷ್ಠವಾಗಿದೆ ಎಂದರು.
ಸುವರ್ಣ ಓಂಕಾರ ಬಲ್ಲೂರೆ ಬಸವಗುರು ಪೂಜೆ ನೆರವೇರಿಸಿದರು. ಶಿಕ್ಷಕಿ ಶ್ರೀದೇವಿ ವಿಜಯಕುಮಾರ ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು. ಸೇವಾ ಸಮಿತಿ ಅಧ್ಯಕ್ಷೆ ಚಂದ್ರಕಲಾ ಪ್ರಭು ಡಿಗ್ಗೆ ಅಧ್ಯಕ್ಷತೆ ವಹಿಸಿದ್ದರು.
ಡಾ.ಕೃತಿಕಾ ವಿಲಾಸ ಕನಸೆ, ವಿದ್ಯಾವತಿ ಕಡಗಂಚೆ, ಶ್ವೇತಾ ಡೋಣಗಾಪುರೆ ಇತರರಿದ್ದರು. ರಾಜೇಶ್ವರಿ ಅಶೋಕ ರಾಗಾ ಸ್ವಾಗತಿಸಿದರು. ಸವಿತಾ ಭೂರೆ ನಿರೂಪಣೆ ಮಾಡಿದರು. ರಾಜೇಶ್ವರಿ ಕುಪೇಂದ್ರ ವಂಕೆ ವಂದಿಸಿದರು.
ಶರಣೆ ಧೂಪದ ಗೊಗ್ಗಾವೆ ವೇಷಭೂಷಣ ಧರಿಸಿ ಶ್ರೀದೇವಿ ವೈಜಿನಾಥ ಪಾಟೀಲ್ ಗಮನ ಸೆಳೆದರು. ಲಲಿತಾಬಾಯಿ ಶಿವರಾಜ ಪ್ರಭಾ ಧರ್ಮಗ್ರಂಥ ಪಠಿಸಿದರು. ನಿರ್ಮಲಾ ಪ್ರಭುಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಲ್ಯಾಣಿ ನಗರದ ಮಹಾನಂದಾ ತಂಡದಿಂದ ಕೋಲಾಟ, ಭಜನೆ ನಡೆಯಿತು. ಸುರೇಖಾ ಬಸವರಾಜ ಬೇಲೂರೆ ವಚನ ಗಾಯನ ನಡೆಸಿಕೊಟ್ಟರು.