ಜಿಲ್ಲೆ

ಟನ್ ಕಬ್ಬಿಗೆ ರೂ.3000 ನಿಗದಿಗೊಳಿಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪ್ರಸಕ್ತ ವರ್ಷ ಟನ್ ಕಬ್ಬಿಗೆ 3000 ರೂ. ನಿಗದಿ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ.
ನಗರದಲ್ಲಿ ಪ್ರತಿಭಟನೆ ನಡೆಸಿ ಕಾರ್ಖಾನೆಯವರು ಕೊಟ್ಟಷ್ಟು ಬೆಲೆ ಎನ್ನುವಂಥ ಸ್ಥಿತಿ ಇದೆ. ಹೀಗಾಗಿ ಎಲ್ಲ ಕಾರ್ಖಾನೆ ಮುಖಸ್ಥರ ಸಭೆ ನಡೆಸಿ ದರ ನಿಗದಿಪಡಿಸಬೇಕು. ಕಳೆದ ವರ್ಷದ ಕಬ್ಬಿನ ಬಿಲ್ ಭಾಲೇಶ್ವರ ಸಕ್ಕರೆ ಕಾರ್ಖನೆ ಪಾವತಿಸಿಲ್ಲ. ಬಿಲ್ ಪಾವತಿಗೆ ಒಂದು ವರ್ಷ ಸಮಯ ತೆಗೆದುಕೊಂಡರೆ ರೈತರು ಜೀವನ ನಡೆಸುವುದು ಹೇಗೆ? ವಾರದಲ್ಲಿ ಬಾಕಿ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸುಮಾರು 18 ಲಕ್ಷ ಮೆ. ಟನ್ ಕಬ್ಬು ಬೆಳೆಯಲಾಗಿದೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಬಂದ್ ಆಗಿದ್ದು, ನೆರೆಯ ಚಿಂಚೋಳಿ ತಾಲೂಕಿನ ಸಿದ್ಧಸಿರಿ ಕಾರ್ಖಾನೆ ಪ್ರಾರಂಭಿಸಲು ಸರ್ಕಾರ ಅನುಮತಿ ಕೊಡುತ್ತಿಲ್ಲ. ಜಿಲ್ಲೆಯಲ್ಲಿ ಇನ್ನುಳಿದ ನಾಲ್ಕು ಕಾರ್ಖಾನೆಗಳು 18 ಲಕ್ಷ ಮೆ. ಟನ್ ಕಬ್ಬು ನುರಿಸಲು ಸಾಧ್ಯವಿಲ್ಲ. ಹೀಗಾಗಿ ಚಾಲ್ತಿಯಲ್ಲಿರುವ ಕಾರ್ಖಾನೆಗಳು ಅಕ್ಟೋಬರ್ ನಿಂದಲೇ ಕ್ರಷಿಂಗ್ ಆರಂಭಿಸಬೇಕು ಎಂದು ಆಗ್ರಹಿಸಿದರು.
ಹೆಸರು, ಉದ್ದು ಮತ್ತು ಸೋಯಾಬೀನ್ ಖರೀದಿ ಕೇಂದ್ರ ಆರಂಭಿಸಿಲ್ಲ. ಖರೀದಿ ಕೇಂದ್ರಗಳಿಲ್ಲದೆ ಸಾಕಷ್ಟು ರೈತರು ಈಗಾಗಲೇ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸಿದರೆ ಉಳಿದ ರೈತರಿಗಾದರೂ ಅನುಕೂಲವಾಗಲಿದೆ ಎಂದು ಕೋರಿದರು.
ನರೇಗಾದಡಿ ಕೃಷಿ ಚಟುವಟಿಕೆ ನಡೆಸಬೇಕು. ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ನಿರಂತರ ಮಳೆಯಿಂದ ಉದ್ದು ಬೆಳೆ ಸಂಪೂರ್ಣ ಹಾನಿಯಾಗಿದೆ. ಕೃಷಿ ಅಧಿಕಾರಿಗಳಿಂದ ಸಮೀಕ್ಷೆ ಮಾಡಿಸಿ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಡಿಸಿಸಿ ಬ್ಯಾಂಕ್‌ಗೆ ಅಮರ ಖಂಡ್ರೆ ಅಧ್ಯಕ್ಷರಾದ ನಂತರ ರೈತರಿಗೆ ಯಾವುದೇ ಪ್ರಕಾರದ ಸಾಲಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕೃಷಿಕರಿಗೆ ಸಾಲ ಒದಗಿಸಲು ಅನುವು ಮಾಡಿಕೊಡಬೇಕು. ಎಲ್ಲ ಸಮಸ್ಯೆಗಳನ್ನು ಗಂಭೀರ ಪರಿಗಣಿಸಿ ಶೀಘ್ರದಲ್ಲಿ ಬಗೆಹರಿಸಬೇಕು. ನಿರ್ಲಕಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾರ್ಮಿ, ಕಾರ್ಯಾಧಕ್ಷ ಶ್ರೀಮಂತ ಬಿರಾದಾರ್, ಪ್ರಮುಖರಾದ ಶೇಷರಾವ ಕಣಜಿ, ಸುಭಾಷ ರಗಟೆ, ವಿಶ್ವನಾಥ ಧರಣೆ, ನಾಗಯ್ಯಾ ಸ್ವಾಮಿ, ಬಾಬುರಾವ ಜೋಳದಾಬಕೆ, ಪ್ರಕಾಶ ಬಾವಗೆ, ಶಿವಾನಂದ ಹುಡುಗೆ, ಪ್ರಭುದಾಸ, ಬಾಬುರಾವ ಬೆಟ್ಟದ್ ಇತರರಿದ್ದರು. ಬೇಡಿಕೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.