ಜಿಲ್ಲೆ

ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಜಿಲ್ಲೆಯ ರಸ್ತೆ ಸುಧಾರಣೆಗೆ ಹೆಚ್ಚಿನ ಅನುದಾನ ಮೂಲಕ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಲಂಜವಾಡ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್ 617ರಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ರಸ್ತೆಗಳು ಉತ್ತಮವಾಗಿದ್ದರೆ ಅಭಿವೃದ್ಧಿ ಆಗುತ್ತದೆ. ಜಿಲ್ಲೆಯ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಭಾಲ್ಕಿ-ಚಿಂಚೋಳಿ ರಾಜ್ಯ ಹೆದ್ದಾರಿ 75ರ ಆಯ್ದ ಭಾಗಗಳ ಸುಧಾರಣೆ 8.69 ಕೋಟಿ ರೂ. ಹಾಗೂ ಔರಾದ್-ಸದಾಶಿವಗಡ್ ರಾಜ್ಯ ಹೆದ್ದಾರಿ 34ರ ಆಯ್ದ ಕಡೆ ಸುಧಾರಣೆಗೆ 5.11 ಕೋಟಿ ರೂ. ಹಾಗೂ ಬಾಲಗಾಂವ (ಮಹಾರಾಷ್ಟ್ರ ಗಡಿ)ಯಿಂದ ಧರ್ಮಪುರ (ತೆಲಂಗಾಣ ಗಡಿ)ವರೆಗೆ ರಸ್ತೆ ಸುಧಾರಣೆ 11.20 ಕೋಟಿ ಸೇರಿ 25 ಕೋಟಿ ಅಂದಾಜು ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಲಂಜವಾಡದಲ್ಲಿ 81 ಲಕ್ಷದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜೆಜೆಎಂ ಅಡಿ 23 ಲಕ್ಷದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಗ್ರಾಮಕ್ಕೆ ಪಶು ಚಿಕಿತ್ಸಾಲಯ ಬೇಡಿಕೆ ಇರುವುದರಿಂದ ಪ್ರಾರಂಭಿಸಲು ಅಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಲಂಜವಾಡಗೆ ನೀರು ಬರಲಿದೆ ಎಂದು ಹೇಳಿದರು.
ಸೂರು ಇಲ್ಲದ ಈ ಭಾಗದ ಬಡವರಿಗೆ ಮನೆ ಮಂಜೂರು ಮಾಡಲಾಗಿದೆ. ಜೋಪಡಿಮುಕ್ತ ಮಾಡುವ ಗುರಿ ಹೊಂದಲಾಗಿದೆ. ಆ ಪಕ್ಷ ಈ ಪಕ್ಷ ಎನ್ನದೆ ಎಲ್ಲರಿಗೂ ಮನೆ ನೀಡಲಾಗಿದೆ. ಭಾಲ್ಕಿ ತಾಲೂಕಿನ 120 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿ ನಡೆಯುತ್ತಿದೆ. ನಾರಾಯಣಪುರ ಜಲಾಶಯದಿಂದ ಜಿಲ್ಲೆಯ 800-900 ಜನವಸತಿ ಪ್ರದೇಶಗಳಿಗೆ ನೀರು ತರುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರಾಧಿಕಾ ಶುಕ್ರಚಾರ್ಯ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ ಕಾಮಶೆಟ್ಟಿ, ಪಶು ಇಲಾಖೆ ಉಪ ನಿರ್ದೇಶಕ ನರಸಪ್ಪ ದೇವಗೊಂಡ, ತಹಸೀಲ್ದಾರ್ ಮಲ್ಲಿಕಾರ್ಜುನ ಇತರರಿದ್ದರು.