ಜಿಲ್ಲೆ

ಇಂಡಿಯಾ ಬುಕ್ ಆಫ್ ರೆಕಾಡ್ಸ್೯ನಲ್ಲಿ ಸಾಧನೆ

ರೇವಣಸಿದ್ದಪ್ಪ ಪಾಟೀಲ್

ಕಮಲನಗರ: ಕರ್ನಾಟಕದ ಎಲ್ಲ ಜಿಲ್ಲೆಗಳ ಹೆಸರು ಕೇವಲ 10.65 ಸೆಕೆಂಡ್ ನಲ್ಲಿ ಹೇಳುವ ಮೂಲಕ ಬೆಂಗಳೂರಿನಲ್ಲಿ ಈಚೆಗೆ ಇಂಡಿಯಾ ಬುಕ್ ಆಫ್ ರೆಕಾಡ್ಸ್೯ ನಡೆಸಿದ ಸ್ಪರ್ಧೆಯಲ್ಲಿ ಪಟ್ಟಣದ ಆರು ವರ್ಷದ ಬಾಲಕಿ ತೋಶ್ನಿ ಘಾಟೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಸಾಧಕರ ಪಟ್ಟಿಗೆ ಸೇರಿದ್ದಾಳೆ.
ಶೈಲೇಶ್ ಮತ್ತು ಅಶ್ವಿನಿ ದಂಪತಿ ಪುತ್ರಿ ತೋಶ್ನಿ ಸದ್ಯ ಯುಕೆಜಿ ಓದುತ್ತಿದ್ದಾಳೆ. ಶೈಲೇಶ್ ಇ-ಕಾಮಸ್೯ ಬ್ರ್ಯಾಂಡ್ ಮ್ಯಾನೇಜರ್ ಆಗಿ ಬೆಂಗಳೂರಿನ ಮಾರತಹಳ್ಳಿಯಲ್ಲಿ ಇದ್ದಾರೆ. ಈ ಹಿಂದೆ 17 ಸೆಕೆಂಡ್ ಗಳಲ್ಲಿ ರಾಜ್ಯದ ಜಿಲ್ಲೆಗಳ ಹೆಸರು ಹೇಳಿದ್ದ ಧ್ವನಿ ಮಲ್ಪಾಡ್ ಎಂಬ ಬಾಲಕಿ ಹೆಸರಿನಲ್ಲಿದ್ದ ದಾಖಲೆ ಮುರಿಯುವ ಮೂಲಕ ತೋಶ್ನಿ ಪ್ರತಿಭೆ ಮೆರೆದಿದ್ದಾಳೆ.
ತೋಶ್ನಿ ಸಾಧನೆಗೆ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ್, ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸೇರಿ ವಿವಿಧ ಸಂಘಟನೆ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದಾರೆ.