ಜಿಲ್ಲೆ

ಆರ್ಥಿಕ ಸದೃಢತೆಗೆ ಧರ್ಮಸ್ಥಳ ಯೋಜನೆ ಸಹಕಾರಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮಹಿಳಾ ಸಮುದಾಯ ಆರ್ಥಿಕವಾಗಿ ಸದೃಢವಾಗಬೇಕು ಎಂಬ ಸದುದ್ದೇಶದಿಂದ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೆರವು ನೀಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್ ಹೇಳಿದರು.
ಮಂಗಲಪೇಟ್ ನ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಪದಾಕಾರಿಗಳ ಸಮಾವೇಶ ಉದ್ಘಾಟಿಸಿದ ಅವರು, ಧರ್ಮಸ್ಥಳ ಯೋಜನೆಗಳು ಅನೇಕ ಮಹಿಳೆಯರನ್ನು ಸ್ವಾವಲಂಬಿಯಾಗಲು ಸಹಕಾರಿ ಆಗಿವೆ. ಕೃಷಿಕರು, ಮಹಿಳೆ, ಯುವ ಸಮೂಹ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಸಮಾಜ ನಿರ್ಮಾಣ ಮಾಡುತ್ತಿರುವುದು ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಗುರುನಾಥ ರಾಜಗೀರಾ ಮಾತನಾಡಿ, ಪ್ರತಿಯೊಬ್ಬ ಮಹಿಳೆ ಸ್ವಾವಲಂಬಿ ಬದುಕು ನಡೆಸಲು ಧರ್ಮಸ್ಥಳ ಯೋಜನೆ ಸಾಕಷ್ಟು ಸಹಾಯ ಮಾಡುತ್ತಿದೆ ಎಂದರು.
ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಚಿಕ್ಕದಾದ ಸಾಲ ಕೊಡಬೇಕಾದರೆ ಹತ್ತಾರು ದಾಖಲೆಗಳನ್ನು ಕೇಳುತ್ತಾರೆ. ಆದರೆ ಯಾವುದೇ ದಾಖಲೆ ಇಲ್ಲದೆ ಅಗತ್ಯವಿದ್ದವರಿಗೆ ಧರ್ಮಸ್ಥಳ ಯೋಜನೆ ಸಾಲಸೌಲಭ್ಯ ಒದಗಿಸಿ ನೆರವಿಗೆ ಬರುತ್ತಿದೆ ಎಂದು ತಿಳಿಸಿದರು.
ಬ್ಯಾಂಕ್ ಆಫ್ ಬರೋಡಾ ಶಾಖಾ ವ್ಯವಸ್ಥಾಪಕ ನರಹರಿ, ಯೋಜನೆ ತಾಲೂಕು ಯೋಜನಾ ಅಧಿಕಾರಿ ಧರ್ಮೇಂದ್ರ ಎನ್. ಮಾತನಾಡಿದರು. ಕೃಷ್ಣಾನಂದ, ಕವಿತಾ, ಕೃಷ್ಣ, ಜ್ಯೋತಿ, ಶಿಲ್ಪಾ, ಸರಸ್ವತಿ, ಸುನೀಲ, ಬೀರಪ್ಪ, ಪ್ರವೀಣ್ ಇತರರಿದ್ದರು.