ಜಿಲ್ಲೆ

ಹೊರ ಗುತ್ತಿಗೆ ಆಯ್ಕೆ ಪಟ್ಟಿ ರದ್ದತಿಗೆ ಒತ್ತಾಯ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೀದರ್ ವಿಶ್ವವಿದ್ಯಾಲಯದ ಹೊರ ಗುತ್ತಿಗೆ ಆಧಾರಿತ ಗ್ರೂಪ್ ಡಿ ನೌಕರರ ಆಯ್ಕೆ ಪಟ್ಟಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಚೈಲ್ಡ್‍ಲೈನ್ ಮೂಲಕ 17 ಜನ ಗ್ರೂಪ್ ಡಿ ಹೊರ ಗುತ್ತಿಗೆ ನೌಕರರ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ, ಆಯ್ಕೆಯಲ್ಲಿ ರೋಸ್ಟರ್ ಅನುಸರಿಸಿಲ್ಲ. ಅಭ್ಯರ್ಥಿಗಳಿಂದ ತಲಾ ರೂ.3 ಲಕ್ಷದಿಂದ ರೂ.5 ಲಕ್ಷದವರೆಗೆ ಲಂಚ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಿದ್ದಾರೆ.
ಕೂಡಲೇ ಪಟ್ಟಿಯನ್ನು ರದ್ದುಪಡಿಸಿ, ಚೈಲ್ಡ್‍ಲೈನ್ ಸಿಬ್ಬಂದಿ, ಬೀದರ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಭೀಮರಾವ್ ಮಾಲಗತ್ತಿ, ಮುಕೇಶ ಚಲ್ವಾ, ಲೋಕೇಶ ಡುಮ್ಮೆ, ಪ್ರಮುಖರಾದ  ಸಿದ್ಧಾರ್ಥ ಬಾವಿದೊಡ್ಡಿ, ಕೃಷ್ಣಾ ಮೇತ್ರೆ, ಸಚಿನ್ ಶೆಟಕಾರ್ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.