ಬೀದರ್: ನಮ್ಮ ಪೂರ್ವಜರ ತ್ಯಾಗ, ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಭಾರತೀಯರು ಸಂಘಟಿತರಾಗಬೇಕು ಎಂದು ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕ ಹಾಗೂ ನಾಟ್ಯಶ್ರೀ ನೃತ್ಯಾಲಯ ವತಿಯಿಂದ ನಗರದ ಗುಂಪಾ ರಸ್ತೆಯಲ್ಲಿನ ರಿಲಯನ್ಸ್ ಟ್ರೆಂಡ್ಸ್ ಹಿಂದುಗಡೆಯ ನಾಟ್ಯಶ್ರೀ ಸಾಂಸ್ಕøತಿಕ ಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ರಾಷ್ಟ್ರ ನಿರ್ಮಾಣದಲ್ಲಿ ಸಾಹಿತ್ಯದ ಕೊಡುಗೆ ಕುರಿತ ಉಪನ್ಯಾಸ ಹಾಗೂ ಭರತನಾಟ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾತಿ ಹೆಸರಲ್ಲಿ ಸಂಘರ್ಷ ಮಾಡುವುದನ್ನು ಬಿಡಬೇಕು. ಹಿಂದೂ ಧರ್ಮದ ಉಳಿವಿಗೆ ಮುಂದಾಗಬೇಕು. ಧರ್ಮ ಉಳಿದರೇನೇ ನಮಗೆ ಉಳಿಗಾಲ ಇದೆ ಎಂದು ತಿಳಿಸಿದರು.
ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದೇ ಸಾಹಿತ್ಯ. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಸಂಚಲನ ಉಂಟು ಮಾಡಿದ್ದ ವೀರ ಸಾವರಕರ್‍ಅವರ ಪುಸ್ತಕವನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿದ್ದು ಸಾಹಿತ್ಯದ ಶಕ್ತಿ ಎಂತಹದ್ದು ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು.
ಜೈಲಿನೊಳಗೆ ಸಾಹಿತ್ಯ ರಚನೆಗೆ ಸಾವರಕರ್ ಅವರ ಬಳಿ ಪೆನ್, ನೋಟ್‍ಪುಸ್ತಕ ಇರಲಿಲ್ಲ. ಆಗ ಅವರು ಮೊಳೆಯಿಂದ ಗೋಡೆ ಮೇಲೆ ಸಾಹಿತ್ಯ ರಚಿಸಿದ್ದರು.ಅದನ್ನು ಕಂಠ ಪಾಠ ಮಾಡಿದ ದೇಶ ಭಕ್ತರು ಹೊರ ಬಂದು ಅದರ ಮೂಲಕ ಜನರಲ್ಲಿ ಸ್ವಾತಂತ್ರ್ಯದ ಜಾಗೃತಿ ಮೂಡಿಸಿದ್ದರು ಎಂದು ತಿಳಿಸಿದರು.
ರಾಮಾಯಣ, ಮಹಾಭಾರತದಿಂದ ಆಧುನಿಕ ಸಾಹಿತ್ಯದವರೆಗೂ ಸಾಹಿತ್ಯ ಮೌಲ್ಯಯುತ ಜೀವನ ಕಟ್ಟಿಕೊಳ್ಳಲು ನೆರವಾಗುತ್ತ ಬಂದಿದೆ. ಹೀಗಾಗಿ ಪಾಲಕರು ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಬೇಕು ಎಂದು ತಿಳಿಸಿದರು.
ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು. ಅವರಲ್ಲಿ ರಾಷ್ಟ್ರಭಕ್ತಿ ಬೆಳೆಸಬೇಕು. ಪ್ರತಿ ಮನೆಯಲ್ಲೂ ರಾಮ, ಸೀತೆ ತಯಾರಾಗಬೇಕು. ಶಿವಾಜಿ ಮಹಾರಾಜರು ಇತಿಹಾಸ ರಚಿಸಲು ಅವರ ತಾಯಿ ಜೀಜಾಮಾತೆಯ ಸಂಸ್ಕಾರವೇ ಕಾರಣ ಎಂದು ಹೇಳಿದರು.
ವಿದ್ಯಾರಣ್ಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ಉದ್ಘಾಟಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಸವ ದಳದ ಜಿಲಾ ್ಲಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್, ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕ ಕೆ.ಸತ್ಯಮೂರ್ತಿ, ಪ್ರಮುಖರಾದ ಬಿ.ಜಿ. ಶೆಟಕಾರ್, ರಾಮಕೃಷ್ಣ ಸಾಳೆ, ನಾರಾಯಣ ಮುಖೇಡಕರ್, ಪಾಂಡುರಂಗ ಪಾಂಚಾಳ, ಶಿವಯ್ಯ ಸ್ವಾಮಿ, ರೇಖಾ ಅಪ್ಪಾರಾವ್ ಸೌದಿ, ಉಮಾಕಾಂತ ಮೀಸೆ, ಶಿವಕುಮಾರ ಕಟ್ಟೆ, ಅನಿಲಕುಮಾರ ದೇಶಮುಖ, ಸಂತೋಷಕುಮಾರ ಮಂಗಳೂರೆ, ಜಯದೇವಿ ಯದಲಾಪುರೆ ಮತ್ತಿತರರು ಇದ್ದರು.
ನಾಟ್ಯಶ್ರೀ ನೃತ್ಯಾಲಯದ ವಿದ್ಯಾರ್ಥಿಗಳು ಆಕರ್ಷಕ ಭರತ ನಾಟ್ಯ ಹಾಗೂ ಕೋಲಾಟ ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು. ಭಾನುಪ್ರಿಯ ಅರಳಿ ಹಾಗೂ ತಂಡದವರು ನಾಡಗೀತೆ ಸುಶ್ರಾವ್ಯವಾಗಿ ಹಾಡಿದರು. ದೇವಿದಾಸ ಜೋಶಿ ಹಾಗೂ ಬಸವರಾಜ ಮೂಲಗೆ ನಿರೂಪಿಸಿದರು.