ಬೀದರ್: ಸರಸ್ವತಿ ವಿಕಾಸ ಶಿಕ್ಷಣ ಸಮಿತಿಯ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಸ್ವದೇಶಿ ವಸ್ತುಗಳ ಬಳಕೆ ಹಾಗೂ ಜಾಗೃತಿ ಕುರಿತ ಸಪ್ತಾಹ ಅರ್ಥಪೂರ್ಣವಾಗಿ ನಡೆಯಿತು. ಈ ವೇಳೆ ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶಕ್ಕೆ ಆಗುವ ಅನುಕೂಲ ಹಾಗೂ ವಿದೇಶಿ ವಸ್ತುಗಳನ್ನು ಬಳಸುವುದರಿಂದ ದೇಶದ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳ ಕುರಿತು ಚಿಂತನ-ಮಂಥನ ಜರುಗಿತು.
ಸಪ್ತಾಹದ ಸಮಾರೋಪ ಸಮಾರಂಭದ ವೇಳೆ ಶಾಲಾ ಆವರಣದಲ್ಲಿ ಸ್ಥಾಪಿಸಿದ್ದ ಯಜ್ಞ ಕುಂಡದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದ ತಂದಿದ್ದ ದಿನಬಳಕೆಯ ವಿದೇಶಿ ವಸ್ತುಗಳನ್ನು ದಹಿಸಿ, ಇನ್ಮುಂದೆ ನಾವು ವಿದೇಶಿ ವಸ್ತುಗಳ ಬಳಕೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದರು. ಇದಲ್ಲದೆ ತಮ್ಮ ಅಕ್ಕ-ಪಕ್ಕದಲ್ಲಿರುವ ಐದಾರು ಮನೆಗಳಿಗೆ ತೆರಳಿ ಸ್ವದೇಶಿ ವಸ್ತುಗಳ ಬಳಕೆ ಕುರಿತು ಅವರಲ್ಲಿ ಜಾಗೃತಿ ಸಹ ಮೂಡಿಸುವುದಾಗಿ ಸಂಕಲ್ಪ ತೊಟ್ಟರು. ಯಜ್ಞ ಕುಂಡದ ಸುತ್ತಲೂ ವಿದ್ಯಾರ್ಥಿಗಳು
ಸೂರ್ಯನ ಕಿರಣಗಳ ಮಾದರಿ ಶಿಸ್ತುಬದ್ಧ, ಆಕರ್ಷಕವಾಗಿ ಕುಳಿತು ವಿದೇಶಿ ವಸ್ತುಗಳನ್ನು ದಹಿಸಿರುವುದು ಸಭಿಕರ ಗಮನ ಸೆಳೆಯಿತು.
ಸರಸ್ವತಿ ಶಿಕ್ಷಣ ಸಮಿತಿ ಉಪಾಧ್ಯಕ್ಷರೂ ಆದ ಹಿರಿಯ ಸಾಮಾಜಿಕ ಚಿಂತಕ ನಾಗೇಶರೆಡ್ಡಿ ಮಾತನಾಡಿ, ಸ್ವದೇಶಿ ಎಂಬ ಪದದಲ್ಲೇ ಬಹಳ ಅರ್ಥ ಹಾಗೂ ಶಕ್ತಿ ಅಡಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯಲ್ಲೂ ಸ್ವದೇಶಿ ಬಹುಮುಖ್ಯ ಪಾತ್ರ ವಹಿಸಿತ್ತು. ದೇಶದ ಆರ್ಥಿಕತೆ ಬಲಿಷ್ಠಗೊಳಿಸುವ ಜೊತೆಗೆ ಆತ್ಮನಿರ್ಭರತೆಗೆ ಸ್ವದೇಶಿಯೇ ಮೂಲವಾಗಿದೆ ಎಂದು ಹೇಳಿದರು.
ಸ್ವದೇಶಿ ವಸ್ತುಗಳ ಬಳಕೆ ನಮ್ಮ ಅರ್ಥವ್ಯವಸ್ಥೆ ಸುಧಾರಣೆಗೆ ಪೂರಕ ಮಾತ್ರವಲ್ಲ, ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವ ಮಹತ್ವದ ಕೆಲಸವೂ ಮಾಡುತ್ತದೆ. ಪ್ರತಿಯೊಬ್ಬರೂ ಇಂದು ಸ್ವದೇಶಿ ವಸ್ತುಗಳ ಬಳಕೆಗೆ ಸಂಕಲ್ಪ ಮಾಡಿ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಕೆಲವೇ ವರ್ಷಗಳಲ್ಲಿ ಭಾರತದ ಆರ್ಥಿಕತೆಗೆ ದೊಡ್ಡ ಶಕ್ತಿ ಸಿಗಲಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡುವ ಅಗತ್ಯತೆಯಿದೆ. ವಿದ್ಯಾರ್ಥಿ ಸಮೂಹ ದೇಶ ಕಟ್ಟುವಂತಹ ಇಂಥ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಮ್ಮ ತಮ್ಮ ಮನೆಯಿಂದಲೇ ವಿದೇಶಿ ವಸ್ತು ಹಠಾವೋ- ಸ್ವದೇಶಿ ವಸ್ತು ಬಚಾವೋ ಆಂದೋಲನ ನಡೆಯಬೇಕು ಎಂದು ಕರೆ ನೀಡಿದರು.
ಸರಸ್ವತಿ ಶಿಕ್ಷಣ ಸಮಿತಿ ಅಧ್ಯಕ್ಷ ಪ್ರೊ. ಎಸ್.ಬಿ.ಸಜ್ಜನಶೆಟ್ಟಿ, ಕಾರ್ಯದರ್ಶಿ ಹನುಮಂತರಾವ ಪಾಟೀಲ್, ಸಹ ಕಾರ್ಯದರ್ಶಿ ಪೀರಪ್ಪ ಔರಾದೆ, ಆಡಳಿತ ಮಂಡಳಿ ಸದಸ್ಯರಾದ ಶಿವರಾಜ ಹಲಶೆಟ್ಟಿ, ನಾರಾಯಣರಾವ ಮುಖೇಡಕರ್, ಎನ್. ಕೃಷ್ಣಾರೆಡ್ಡಿ, ಚನ್ನಬಸವಂತರೆಡ್ಡಿ,
ಶಿವಶರಣಪ್ಪ ಪಾಟೀಲ್, ಶಿವಾನಂದ ದಾಡಗೆ, ಪ್ರೌಢಶಾಲೆ ಮುಖ್ಯ ಗುರು ಪ್ರತಿಭಾ ಚಾಮಾ ಇತರರಿದ್ದರು.