ಜಿಲ್ಲೆ

ಅಲ್ಲಮಪ್ರಭು ಸಂಘ: ರೂ. 64 ಲಕ್ಷ ಲಾಭ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ಬಸವ ಮಂಟಪದಲ್ಲಿ ಇರುವ ಅಲ್ಲಮಪ್ರಭು ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ. 64 ಲಕ್ಷ ಲಾಭ ಗಳಿಸಿದೆ.
ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಸಂಘದ 22ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾರ್ಜಾಪುರ ಈ ವಿಷಯ ತಿಳಿಸಿದರು.
ಲಾಭದಲ್ಲಿ ಸದಸ್ಯರಿಗೆ ಶೇ 25 ರಷ್ಟು ಪಾಲು ನೀಡಲಾಗುವುದು ಎಂದು ಪ್ರಕಟಿಸಿದರು.
ಸಂಘದಿಂದ ಮಾರ್ಚ್ 31 ರ ವರೆಗೆ ಸದಸ್ಯರಿಗೆ ರೂ. 11 ಕೋಟಿ ಸಾಲ ವಿತರಿಸಲಾಗಿದೆ. ಸಂಘ ರೂ. 19.37 ಕೋಟಿ ದುಡಿಯುವ ಬಂಡವಾಳ, ರೂ. 14.27 ಕೋಟಿ ವಿವಿಧ ರೀತಿಯ ಠೇವಣಿ, ರೂ. 4.17 ಕೋಟಿ ಕಾಯ್ದಿಟ್ಟ ಮತ್ತು ಇತರ ನಿಧಿಗಳನ್ನು ಹೊಂದಿದೆ ಎಂದು ಹೇಳಿದರು.
ಗ್ರಾಹಕರ ಅನುಕೂಲಕ್ಕಾಗಿ ಗುಂಪಾ ರಸ್ತೆಯಲ್ಲಿ ಇರುವ ಕೆ.ಆರ್.ಇ. ಸಂಸ್ಥೆಯ ಕಾಂಪ್ಲೆಕ್ಸ್‍ನಲ್ಲಿ ಸಂಘದ ಮೊದಲ ಶಾಖೆ ಈಚೆಗೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಸಂಘದ ಹಿರಿಯ ಸದಸ್ಯರಾದ ಬಸವರಾಜ ಬುಕ್ಕಾ, ಮಲ್ಲಯ್ಯ ಸ್ವಾಮಿ, ಗುರುನಾಥ ನಿಡಗುಂದೆ, ಕಾಶೀನಾಥ ಸೂರ್ಯವಂಶಿ, ಶಂಕರರಾವ್ ಬಿರಾದಾರ, ನಾಗಶೆಟ್ಟಿ ವಗದಾಳೆ, ಶರಣಪ್ಪ ಮಾಜರವಾಡೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ಅಶೋಕ ಶೀಲವಂತ, ರಾಜೇಂದ್ರಕುಮಾರ ಗಂದಗೆ, ಬಸವಕುಮಾರ ಪಾಟೀಲ, ಪ್ರವೀಣ್ ಬುಡ್ಡನೋರ, ಅನುರಾಧ ವಿ. ದೇಶಮುಖ ಉಪಸ್ಥಿತರಿದ್ದರು.
ನೂತನ ಶಾಖೆಯ ವ್ಯವಸ್ಥಾಪಕ ಜಗನ್ನಾಥ ಪಾಟೀಲ ವಾರ್ಷಿಕ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ ಸ್ವಾಮಿ ನಿರೂಪಿಸಿದರು. ನಿರ್ದೇಶಕ ವಿವೇಕಾನಂದ ಪಟ್ನೆ ವಂದಿಸಿದರು.