ಬೀದರ್: ಬಸವಾದಿ ಶರಣರು ನೀಡಿದ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ.ಸಂಗ್ರಾಮ ಏಂಗಳೆ ಹೇಳಿದರು.
ಇಲ್ಲಿನ ವಿದ್ಯಾನಗರ ಬಡಾವಣೆಯ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡಿದ್ದ 166ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಪ್ರತಿಯೊಬ್ಬರೂ ನೆಮ್ಮದಿ ಜೀವನ ಸಾಗಿಸಬಹುದು ಎಂದರು.
ವಚನ ಸಾಹಿತ್ಯ ಜಗತ್ತಿನಲ್ಲೇ ವಿಶಿಷ್ಟ ಮತ್ತು ವಿಶೇಷ ಸಾಹಿತ್ಯವಾಗಿದೆ. ವಚನಗಳು ಮನುಷ್ಯನನ್ನು ಜ್ಞಾನದ ಕಡೆಗೆ ಕರೆ ಕರೆದುಕೊಂಡು ಹೋಗುತ್ತಿದೆ. ನಿತ್ಯವೂ ವಚನಗಳನ್ನು ಓದಬೇಕು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶಿವಯೋಗ ಮಠದ ಶ್ರೀ ಪಂಚಯ್ಯಾ ಸ್ವಾಮಿ ಮಾತನಾಡಿ, ಪ್ರಾಮಾಣಿಕತೆಯಿಂದ ಸತ್ಯ-ಶುದ್ಧ ಕಾಯಕ ಮಾಡಿ ಅಂತರಂಗ ಮತ್ತು ಬಹಿರಂಗದಿಂದ ಶುದ್ಧವಾಗಿಟ್ಟಿ ಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದು ಹೇಳಿದರು
ಪ್ರವಚನಕಾರ್ತಿ ಭಾರತಿ ಆರ್. ಪಾಟೀಲ್ ಮಾತನಾಡಿ, ಜೀವನದಲ್ಲಿ ಬಡತನ, ಶ್ರೀಮಂತ, ಮುಪ್ಪು, ಸಾವು, ಕೀರ್ತಿ ಮತ್ತು ಅಪಕೀರ್ತಿಗಳು ಬರುತ್ತವೆ. ಅವುಗಳನ್ನು ದಾಟಿ ಸುಜ್ಞಾನವೆಂಬ ಮಹಾ ಬೆಳಕಿನ ಕಡೆಗೆ ನಾವು ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಸಾದ ನಿಲಯದ ಸಂಚಾಲಕ ಪ್ರೊ.ಉಮಾಕಾಂತ ಮೀಸೆ ಮಾತನಾಡಿ, ಕಾಯಕ ಮತ್ತು ದಾಸೋಹಕ್ಕೆ ಹೆಚ್ಚು ಮಹತ್ವವನ್ನು 12ನೇ ಶತಮಾನದಲ್ಲಿ ನೀಡಲಾಗಿತ್ತು. ಅದೇ ಕಾರ್ಯವನ್ನು ಮಠಗಳು ಇಂದಿಗೂ ಮುಂದುವರಿಸಿಕೊಂಡು ಬರುತ್ತಿವೆ. ಶರಣರ ಸರಳವಾದ ವಚನಗಳು ನಿತ್ಯ ಓದಬೇಕು ಎಂದು ಹೇಳಿದರು.
ಕರುಣಾ ಶೆಟಕಾರ್, ಶ್ರದ್ಧಾ ಪ್ರಕಾಶ ಮಾತನಾಡಿದರು. ನಿವೃತ್ತ ಶಿಕ್ಷಕ ಶ್ರೀಕಾಂತ ಬಿರಾದಾರ್, ಪ್ರಮುಖರಾದ ಪ್ರೊ.ಭಾಗಿರಥಿಬಾಯಿ ಕೊಂಡಾ, ಕಸ್ತೂರಿಬಾಯಿ ಬಿರಾದಾರ್, ಸವಿತಾ ಗಂದಿಗುಡೆ, ತೀರ್ಥಮ್ಮಾ, ಸುನೀತಾ, ರೇಣುಕಾ, ಮಹಾನಂದಾ ಸ್ವಾಮಿ, ಲಿಂಗಶೆಟ್ಟಿ ಬಿರಾದಾರ್, ರಾಮನಗೌಡ ಬಿರಾದಾರ್, ನಾಗಶೆಟ್ಟಿ ಜೋತೆಪ್ಪನೋರ್, ಶಾಮರಾವ ಮ್ಯಾಕರೆ, ಧುಳಯ್ಯಾ ಸ್ವಾಮಿ, ಗುರುನಾಥ ಬಿರಾದಾರ್ ಇತರರಿದ್ದರು.
ಚನ್ನಬಸಪ್ಪ ನೌಬಾದೆ, ನಾಗನಾಥ ಪಾಂಚಾಳ ಮತ್ತು ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು. ಮೀನಾಕ್ಷಿ ಪಾಟೀಲ್ ಸ್ವಾಗತಿಸಿದರು. ಲಕ್ಷ್ಮೀ ಬಿರಾದಾರ್ ನಿರೂಪಣೆ ಮಾಡಿದರು. ಮಾಲಾಶ್ರೀ ಗುರುನಾಥ ವಂದಿಸಿದರು.