ಬಸವಕಲ್ಯಾಣ: ಬಸವಾದಿ ಶರಣರ ಕಾಯಕ ಭೂಮಿ ಕಲ್ಯಾಣದಲ್ಲಿ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ನೂತನ ಅನುಭವ ಮಂಟಪ ಕಾಮಗಾರಿಗೆ ಮತ್ತಷ್ಟು ವೇಗ ನೀಡಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು, 2025ರ ಡಿಸೆಂಬರ್ ಒಳಗೆ ಕೆಲಸ ಮುಗಿಸಬೇಕಿದೆ. ಸದ್ಯದ ವೇಗ ನೋಡಿದರೆ ನಿಗದಿದ ಸಮಯಕ್ಕೆ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ಕಾಮಗಾರಿ ವೇಗ ಹೆಚ್ಚಿಸಬೇಕು ಎಂದು ನಿರ್ದೇಶನ ನೀಡಿದರು.
ನೂತನ ಅನುಭವ ಮಂಟಪ ಕಟ್ಟಡದ ಒಳಭಾಗದಲ್ಲಿ 770 ಅಮರಗಣಂಗಳ ಸ್ಮರಣೆಗಾಗಿ ನಿರ್ಮಿಸುತ್ತಿರುವ 770 ಕಂಬಗಳ ಮೇಲೆ ಶರಣರ ವಚನಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಬರೆಯಬೇಕು. ಈ ಕುರಿತು ಶೀಘ್ರದಲ್ಲೇ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ನೇತೃತ್ವದಲ್ಲಿ ಸಭೆ ಕರೆಯಲಾಗುವುದು ಎಂದರು.
ಡಿಸಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಎಸ್ಪಿ ಪ್ರದೀಪ್ ಗುಂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಪ್ರಮುಖರಾದ ಶಿವರಾಜ ನರಶೆಟ್ಟಿ, ಶಶಿಕಾಂತ ದುರ್ಗೆ ಇತರರಿದ್ದರು.