ಬೀದರ್: ಔರಾದ್ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಧರಣಿ ನಡೆಸಲಾಯಿತು.
ಇಲ್ಲಿನ ಜಿಲ್ಲಾ ಉಸ್ತುವಾರಿ ಕಚೇರಿ ಎದುರು ಹೋರಾಟ ನಡೆಸಿ, ನಿಡೋದಾ, ಬೇಡಕುಂದಾ, ಬಳತ (ಬಿ), ಬಳತ (ಕೆ), ನಾಗೂರ (ಎಂ), ಹೆಡಗಾಪುರ, ರಕ್ಷಾಳ, ಆಲೂರ (ಕೆ), ಬೋರಾಳ, ಅಲ್ಲಾಪುರ, ಸಂತಪುರ, ಬಲ್ಲೂರ, ಸುಂಧಾಳ, ಮಮದಾಪುರ, ಕೌಡಗಾಂವ, ಕೌಠಾ, ಜವಲ ತಾಂಡಾ, ಕಾರಬಾರ ತಾಂಡ, ಮಾರಜೂ ತಾಂಡಾ ಹೀಗೆ ಹಲವಾರು ಗ್ರಾಮಗಳಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ದೂರಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಕಳಪೆ ಕಾಮಗಾರಿ ಮಾಡಿದ್ದರಿಂದ ಮಳೆಗಾಲದಲ್ಲಿಯೂ ನೀರಿಗಾಗಿ ಪರದಾಡಬೇಕಾಗಿದೆ. ಕೆಲವು ಕಡೆ ನಕಲಿ ಬಿಲ್ ಸೃಷ್ಟಿಸಿದ್ದಾರೆ. ಒಂದು ವಾರದೊಳಗೆ ತನಿಖೆಗೆ ಆದೇಶ ಹೊರಡಿಸಬೇಕು. ನಿರ್ಲಕ್ಷ್ಯ ಮಾಡಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಸಿಂಧೆ, ನಗರ ಘಟಕದ ಅಧ್ಯಕ್ಷ ವಿನೋದ ಸಿಂಧೆ, ಪ್ರಮುಖರಾದ ಮಹೇಂದ್ರಕುಮಾರ ಹೊಸಮನಿ, ಶಿವ ಬೇಲೂರೆ, ಆಕಾಶ ತ್ರಿಮುಖೆ, ಧನರಾಜ ಮೇತ್ರೆ, ಗುರು ನೇಮತಾಬಾದ್, ಸಂದೀಪ ಕಾಂಟೆ, ಸಂಗಮೇಶ ಭಾವಿದೊಡ್ಡಿ, ಜೈಭೀಮ ಖ್ಯಾದೆ, ಗೌತಮ ಪ್ರಸಾದ, ಅಖಿಲೇಶ್ ಸಾಗರ್ ಇತರರಿದ್ದರು.