ಜಿಲ್ಲೆ

ಸಮಸಮಾಜ ನಿರ್ಮಾಣಕ್ಕೆ ಪೂಜ್ಯರ ಶಕ್ತಿ ಅಗತ್ಯ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಮಾಜದಲ್ಲಿ ಸಾಮರಸ್ಯ ನಿರ್ಮಾಣದ ಅಗತ್ಯವಿದೆ. ಇದರಲ್ಲಿ ಪೂಜ್ಯರ, ಸಂತರ, ಸ್ವಾಮೀಜಿಗಳ (ಧರ್ಮ ಗುರುಗಳ) ಪಾತ್ರ ಅತ್ಯಂತ ಹಿರಿದಾಗಿದೆ ಎಂದು ಭಾರತೀಯ ಶಿಕ್ಷಣ ಮಂಡಲದ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಹೇಳಿದರು.
ಜಿಲ್ಲಾ ಸಾಮಾಜಿಕ ಸಾಮರಸ್ಯ ವೇದಿಕೆಯಿಂದ ನಗರದಲ್ಲಿ ಜಿಲ್ಲೆಯ ಪೂಜ್ಯರು, ಸಂತರೊಂದಿಗೆ ಆಯೋಜಿಸಿದ್ದ ಸಂವಾದ ಗೋಷ್ಠಿಯಲ್ಲಿ ಮಾತನಾಡಿ, ಭಾರತದ ಹಿತ ಸಂಘಟನೆಯಲ್ಲೇ ಅಡಗಿದೆ. ನಾವು ಒಗ್ಗಟ್ಟು ಪ್ರದರ್ಶಿಸಿದಾಗೆಲ್ಲ ಶಕ್ತಿಶಾಲಿಯಾಗಿದ್ದೇವೆ. ವಿಘಟಿತರಾದಾಗ ಅದರ ಬೆಲೆಯನ್ನೂ ತೆತ್ತಿದ್ದೇವೆ. ಇತಿಹಾಸದ ಕಠೋರ ಸತ್ಯಗಳಿಂದ ಪಾಠ ಕಲಿಯಬೇಕು ಎಂದರು.
ಜಾತಿಯತೆ, ಮೇಲು-ಕೀಳು, ಅಸಮಾನತೆ ಸ್ವಸ್ಥ ಸಮಾಜಕ್ಕೆ ಕಂಟಕವಾಗಿವೆ. ನಮ್ಮ ಮಧ್ಯೆ ಇರುವ ಸಮಾಜಘಾತುಕ ಶಕ್ತಿಗಳು ಇದರ ದುರ್ಲಾಭ ಪಡೆದುಕೊಂಡು ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರದಿಂದ ಇರಬೇಕಾಗಿದೆ. ಸಮಾಜದಲ್ಲಿ ಕೆಳಮಟ್ಟದ ಜತೆಗೆ ಸರ್ವ ಸಮುದಾಯದಲ್ಲಿ ಸಾಮರಸ್ಯ ಗಟ್ಟಿಗೊಳಿಸಿ, ಎಲ್ಲರಿಗೂ ಒಟ್ಟುಗೂಡಿಸುವಲ್ಲಿ ಪೂಜ್ಯರ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದು ಪ್ರತಿಪಾದಿಸಿದರು.
ಎಲ್ಲರಿಗೂ ಅಪ್ಪಿಕೊಂಡು ಧರ್ಮ ಸಮನ್ವಯತೆಯಿಂದ ಬದುಕುವ ಸಮಾಜ ನಮ್ಮದಾಗಿದೆ. ಆದರೂ ಕೆಲವು ಸಮಾಜಘಾತುಕರು, ದುಷ್ಟರು ತಮ್ಮ ಸ್ವಾರ್ಥಕ್ಕಾಗಿ ಈ ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಭಾರತಕ್ಕೆ ತುಳಿಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರಗಳು ನಡೆದಿವೆ. ಪರಿಸ್ಥಿತಿಯ ಸೂಕ್ಷ್ಮಕತೆ ಅರಿತು ಸಂಘಟಿತರಾಗಬೇಕಿದೆ ಎಂದರು.
ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಎಲ್ಲ ಧರ್ಮದ ಗುರುಗಳು, ಮಹಾಪುರುಷರು ಉತ್ತಮ ಸಮಾಜ ನಿರ್ಮಾಣದ ತತ್ವಗಳನ್ನೇ ಸಾರಿದ್ದಾರೆ. ಎಲ್ಲ ಧರ್ಮ ಗ್ರಂಥಗಳು ಸಹ ಮಾನವೀಯ ಮೌಲ್ಯಗಳನ್ನೇ ಎತ್ತಿ ಹಿಡಿದಿವೆ. ಹೀಗಿರುವಾಗ ಜಾತಿ ಹೆಸರಲ್ಲಿ ಬಡಿದಾಟವೇಕೆ? ನಾವೆಲ್ಲ ಎಚ್ಚರವಾಗಿ ವಸ್ತುಸ್ಥಿತಿ ಅರಿತು ಸಶಕ್ತ, ಸಮೃದ್ಧ ಭಾರತ ಕಟ್ಟಲು ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಇಂದು ಶಾಂತಿ, ಸೌಹಾರ್ದ ವಾತಾವರಣ ನಿರ್ಮಾಣದ ಅಗತ್ಯವಿದೆ. ಸಾಮರಸ್ಯ ನೈಜ ಆಚರಣೆಯಲ್ಲಿ ತರಬೇಕಿದೆ. ಆಚಾರ-ವಿಚಾರ, ನಡೆ-ನುಡಿ ಒಂದಾದಾಗ ಎಲ್ಲವೂ ಕಾರ್ಯರೂಪಕ್ಕೆ ತರಲು ಸಾಧ್ಯ. ಬಸವಾದಿ ಶರಣರೆಲ್ಲ ಸಮ ಸಮಾಜದ ನಿರ್ಮಾಣವನ್ನೇ ಬಯಸಿದ್ದರು. ಅವರ ಆಶಯದಂತೆ ಕೆಲಸ ನಡೆದಿವೆಯೇ ಎಂಬ ಬಗ್ಗೆ ಚಿಂತನೆ ನಡೆಯಬೇಕಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಸಾಮರಸ್ಯ ವಿಭಾಗ ಉತ್ತರ ಪ್ರಾಂತ ಸಂಯೋಜಕ ಶಿವಲಿಂಗ ಕುಂಬಾರ ಮಾತನಾಡಿದರು. ಶ್ರೀ ಶಿವಯೋಗೇಶ್ವರ ಸ್ವಾಮೀಜಿ, ಶ್ರೀ ಜಯಶಾಂತಲಿಂಗ ಶಿವಾಚಾರ್ಯ, ಶ್ರೀ ಹಾವಗಿಲಿಂಗ ಶಿವಾಚಾರ್ಯರು, ಶ್ರೀ ಶಿವಲಿಂಗ ಸ್ವಾಮೀಜಿ ಖೇಳಗಿ, ಶ್ರೀ ಶಂಕರಲಿಂಗ ಸ್ವಾಮೀಜಿ ಸೊಂತ, ಭಂತೆ ಜ್ಞಾನಸಾಗರ, ಜ್ಞಾನಿ ದರ್ಬಾರಾಸಿಂಗ್, ಶ್ರೀ ಗೋವಿಂದ ಮಹಾರಾಜ ಸೇರಿದಂತೆ 35ಕ್ಕೂ ಹೆಚ್ಚು ಶ್ರೀಗಳು ಇದ್ದರು. ಸಾಮರಸ್ಯ ವೇದಿಕೆ ಜಿಲ್ಲಾಧ್ಯಕ್ಷ ಹಾವಶೆಟ್ಟಿ ಪಾಟೀಲ್, ಜಿಲ್ಲಾ ಸಂಯೋಜಕ ಬಾಬುರಾವ ಮುಸ್ತಾಪುರೆ, ಉತ್ತರ ಪ್ರಾಂತ ಮಾಧ್ಯಮ ಪ್ರಮುಖ ಸದಾನಂದ ಜೋಶಿ, ಪ್ರಮುಖರಾದ ಡಾ.ಬಸವರಾಜ ಪಾಟೀಲ್ ಅಷ್ಟೂರ್, ಸು.ಕೃಷ್ಣಮೂರ್ತಿ ಹುಬ್ಬಳ್ಳಿ, ಹಣಮಂತರಾವ ಪಾಟೀಲ್, ನಾಗೇಶರಡ್ಡಿ ಇತರರಿದ್ದರು.

ಮಹಾಪುರುಷರನ್ನು ಜಾತಿಗೆ ಸೀಮಿತ ಬೇಡ
ಮೌಲಿಕ ಚಿಂತನೆ, ತತ್ವಾದರ್ಶ ಮುಖಾಂತರ ಸಮಾಜಕ್ಕೆ ಬೆಳಕಾಗಿ ಭಾರತ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡಿದ ಅನೇಕ ಮಹಾಪುರುಷರು ಒಂದು ಜಾತಿಗೆ ಸೀಮಿತರಲ್ಲ. ಅವರೆಲ್ಲರೂ ಸಮಾಜ ಸುಧಾರಕರು. ಅವರ ತತ್ವ, ವಿಚಾರ ಅರಿತು ಸಾಗಬೇಕಾಗಿದೆ ಎಂದು ಶಂಕಾರನಂದ ಹೇಳಿದರು. ಮಹಾತ್ಮ ಬುದ್ಧ, ಬಸವಣ್ಣ, ಕನಕದಾಸರು, ಛತ್ರಪತಿ ಶಿವಾಜಿ, ಅಹಿಲ್ಯಾಬಾಯಿ ಹೋಳ್ಕರ್, ಡಾ.ಅಂಬೇಡ್ಕರ್ ಮುಂತಾದವರ ಜಯಂತ್ಯುತ್ಸವ ಎಲ್ಲರೂ ಸೇರಿ ಸಾಮೂಹಿಕವಾಗಿ ಆಚರಿಸಬೇಕು ಎಂದು ಹೇಳಿದರು.