ಜಿಲ್ಲೆ

ಫೋಟೋ ಅರಿವು ಮೂಡಿಸುವ ದಾರಿ

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ಫೋಟೋಗಳು ಸಮಾಜದಲ್ಲಿ ಅರಿವು ಮೂಡಿಸುವ, ಹೊಸ ತಿಳಿವಳಿಕೆ ಕೊಡುವ ಹಾಗೂ ಪ್ರಜ್ಞೆಯ ದಾರಿಯಾಗಿವೆ ಎಂದು ಬೆಂಗಳೂರಿನ ಲೇಖಕ ಸಹ್ಯಾದ್ರಿ ನಾಗರಾಜ ಹೇಳಿದರು.
ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ಸಹಯೋಗದಡಿ ಏರ್ಪಡಿಸಿದ್ದ ಚಿತ್ರ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಮಾಜ, ರಾಜಕಾರಣ ಮತ್ತು ಸಂಸ್ಕೃತಿಯ ಸಂಗತಿಗಳನ್ನು ಒಳಗೊಂಡ ಫೋಟೋಗಳು ಸಾಂಸ್ಕೃತಿಕ ರಾಜಕಾರಣದ ಭಾಗವಾಗಿವೆ. ಫೋಟೋ, ವಿಡಿಯೋ ಸರಿಯಾದ ಕ್ರಮದಲ್ಲಿ ಬಳಸುವ ಅಗತ್ಯವಿದೆ ಎಂದರು.
ಪ್ರತಿಷ್ಠಾನದ ನಿರ್ದೇಶಕ ಡಾ.ಭೀಮಾಶಂಕರ ಬಿರಾದಾರ್ ಮಾತನಾಡಿ, ಫೋಟೋಗಳು ಹಿಂಸೆ, ಕ್ರೌರ್ಯ, ಯುದ್ಧದ ಸನ್ನಿವೇಶ, ಹಾಗೂ ಪರಿಣಾಮಗಳ ಬಗ್ಗೆ ಹೇಳುತ್ತವೆ. ಪ್ರಕೃತಿ ವಿಸ್ಮಯ, ಅಚ್ಚರಿಗಳನ್ನು ದಾಖಲಿಸುವ ದಾರಿಗಳಾಗಿವೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯದ ಜತೆಗೆ ಫೋಟೋಗ್ರಾಫಿಯ ಅನನ್ಯ ನಂಟಿದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕೃಪಾಕರ ಸೇರಿ ಹಲವರು ಸೆರೆಹಿಡಿದ ಫೋಟೋಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದಿವೆ. ಸಾಹಿತ್ಯದ ಶಬ್ದದಲ್ಲಿ ಸಮಾಜದ ಮುಖ ಕಾಣುತ್ತೇವೆ. ಹಲವು ಫೋಟೋ ಮತ್ತು ವಿಡಿಯೋಗಳು ಲೋಕದ ದೃಶ್ಯ ಕಾವ್ಯಗಳಾಗಿವೆ ಎಂದರು.
ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೀರೆ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ್, ಬಾಲಾಜಿ ಕುಂಬಾರ, ಶಿವಲಿಂಗಯ್ಯ ಸ್ವಾಮಿ, ಗಂಗಾಧರ ಸಾಲಿಮಠ, ರೇವಣಸಿದ್ದಪ್ಪ ಸೂಗೂರ ಇತರರಿದ್ದರು. ಡಾ.ಸಂಜುಕುಮಾರ ಜಲ್ದೆ ಸ್ವಾಗತಿಸಿದರು. ಪ್ರೇಮಸಾಗರ ಪಾಟೀಲ್ ನಿರೂಪಣೆ ಮಾಡಿ ವಂದಿಸಿದರು.