ಜಿಲ್ಲೆ

ಮಠಾಧೀಶರನ್ನು ಕೊಟ್ಟ ಹಾನಗಲ್ ಶ್ರೀ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಹಾನಗಲ್ ಕುಮಾರ ಶಿವಯೋಗಿಗಳು ಸಮಾಜಕ್ಕೆ ಮಠಾಧೀಶರನ್ನು ಕೊಟ್ಟಿದ್ದರು ಎಂದು ಹೈದರಾಬಾದ್-ಹಲಬರ್ಗಾ-ಶಿವಣಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ನಡೆದ ಹಾನಗಲ್ ಕುಮಾರ ಶಿವಯೋಗಿಗಳ 157ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸುಂದರ ಸಮಾಜ ಕಟ್ಟುವುದೇ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಶಿವಯೋಗ ಮಂದಿರ ಸ್ಥಾಪಿಸಿ, ಅಲ್ಲಿ ಮಠಾಧೀಶರಾಗ ಬಯಸುವವರಿಗೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ತರಬೇತಿ ನೀಡಿದ್ದರು. ಈಗ ಪ್ರತಿ ಊರಲ್ಲೂ ಮಠಾಧೀಶರನ್ನು ಕಾಣುತ್ತಿರುವುದರ ಶ್ರೇಯ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಶ್ರೀಗಳು ಸಮಾಜ ಸಂಘಟನೆಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸ್ಥಾಪಿಸಿದ್ದರು. ಗದಗಿನ ಪುಣ್ಯಾಶ್ರಮವನ್ನು ಎತ್ತರಕ್ಕೆ ಬೆಳೆಸಿದ್ದರು. ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಜನರಲ್ಲಿ ಆಧ್ಯಾತ್ಮದ ಒಲವು ಬೆಳೆಸಿದ್ದರು. ಬಡವರು, ದೀನ- ದಲಿತರ ಬಗ್ಗೆ ಅವರಿಗೆ ಬಹಳ ಕಾಳಜಿ ಇತ್ತು. ಸಮಾಜಕ್ಕೆ ಅವರ ಕೊಡುಗೆ ವರ್ಣನಾತೀತ ಎಂದರು.
ರಾಣೆಬೆನ್ನೂರು ತಾಲ್ಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮದಲ್ಲಿ ನೀಲಮ್ಮ ತಾಯಿ ಉದರದಲ್ಲಿ ಜನಿಸಿದ್ದ ಅವರು ಬಾಲ್ಯದಲ್ಲಿ ಕಡು ಬಡತನದಲ್ಲಿ ಬೆಳೆದಿದ್ದರು. ಗುರು ಭಕ್ತಿ ಹಾಗೂ ಜ್ಞಾನದ ಬಲದಿಂದ ಇಡೀ ಸಮಾಜವೇ ಗೌರವಿಸುವ ವ್ಯಕ್ತಿಯಾಗಿ ರೂಪುಗೊಂಡರು. ಅವರು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಗ್ರಾಮದ ಪ್ರಮುಖರಾದ ಮಲ್ಲಿಕಾರ್ಜುನ ಚಲುವಾ, ವೀರಶೆಟ್ಟಿ ಪಾಟೀಲ, ಉಮಾಕಾಂತ ಪ್ರಭಾ, ರಮೇಶ ಪ್ರಭಾ, ಧನರಾಜ ಪಾಟೀಲ, ಬಸಯ್ಯ ಸ್ವಾಮಿ, ರಾಜಕುಮಾರ ಪಾಟೀಲ, ಅನಿಲ್ ಬಾಳೂರೆ, ಕಾಶೀನಾಥ ಧರ್ಮಣ್ಣ, ರಾಜು ಕುಂಬಾರ, ಶೇಷಪ್ಪ ಧರ್ಮಣ್ಣ, ರಾಜು ಪ್ರಭಾ, ಅಮರ ಪ್ರಭಾ ಮತ್ತಿತರರು ಇದ್ದರು.