ಕಮಲನಗರ: ಮಕ್ಕಳ ಹಕ್ಕುಗಳ ರಕ್ಷಣೆ ಸುರಕ್ಷತಾ ನಿಯಮ ಕಡ್ಡಾಯ ಪಾಲಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ ಕೋಸಂಬೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಠಾಣಾಕುಶನೂರ ಸರ್ಕಾರಿ ಪ್ರೌಢ ಶಾಲೆ ಮತ್ತು ಪಿಯು ಕಾಲೇಜು ವಿದ್ಯಾರ್ಥಿನಿಯರ ಶೌಚಗೃಹಕ್ಕೆ ಬೀಗ ಹಾಕಲಾಗಿದೆ. ಅಲ್ಲಿ ಮಕ್ಕಳ ರಕ್ಷಣಾ ಸಮಿತಿ, ಸಹಾಯವಾಣಿ, ಮಕ್ಕಳ ರಕ್ಷಣಾ ಪಡೆ, ಮಕ್ಕಳ ಹಕ್ಕುಗಳ ಕ್ಲಬ್ ಮುಂತಾದ ಸಮಿತಿಗಳು ರಚನೆಯಾಗಿಲ್ಲ. ಈ ಬಗ್ಗೆ ವಾರದಲ್ಲಿ ಸಮಗ್ರ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಧೋಳ(ಬ) ಮತ್ತು ಠಾಣಾಕುಶನೂರ ಬಿಸಿಎಂ ವಸತಿ ನಿಲಯದಲ್ಲಿ ಮಕ್ಕಳ ಸುರಕ್ಷತಾ ಕ್ರಮ, ಸಲಹಾ ಪೆಟ್ಟಿಗೆ, ಸಮರ್ಪಕ ಶೌಚಗೃಹ ವ್ಯವಸ್ಥೆ ಮತ್ತು ಸಮರ್ಪಕ ದಾಖಲಾತಿ ಇಲ್ಲದಿರುವುದು ವಾರ್ಡನ್ ಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ನೂನ್ಯತೆ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆಗೆ ಸೂಚಿಸಿದರು.
ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅನೀಲ ಮೇಲ್ದೊಡ್ಡಿ, ಪಿಆರ್ಇ ಎಇಇ ವೆಂಕಟ್ ಸಿಂಧೆ, ಮಹಿಳಾ ಮತ್ತು ಮಕ್ಕಳ ಯೋಜನಾಧಿಕಾರಿ ಈಮಲಪ್ಪ ಡಿ.ಕೆ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪುರೆ, ಸಿಪಿಐ ಅಮರೆಪ್ಪ ಶಿವಬಲ್, ಬಿಇಒ ಸುಧಾರಾಣಿ ಇತರರಿದ್ದರು.